ಭಾರತದ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾದಿಂದ ಗ್ರಾಮಗಳ ನಿರ್ಮಾಣ
ನವದೆಹಲಿ, ಡಿಸೆಂಬರ್ 17: ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯು ಉದ್ವಿಗ್ನತೆಗೆ ಕಾರಣವಾಗಿದೆ.
ಇದೇ ವೇಳೆ, ಭಾರತದ ಭೂ ಪ್ರದೇಶದಲ್ಲಿರುವ ಆಯಕಟ್ಟಿನ ಜಾಗಗಳಲ್ಲಿ ಚೀನಾ ದೇಶವು ಮಾದರಿ ಗ್ರಾಮಗಳ ನಿರ್ಮಾಣವನ್ನು ಮುಂದುವರಿಸಿದೆ.
ಭೂತಾನ್‌ನಲ್ಲಿರುವ ಪ್ರದೇಶವನ್ನು(ಭಾರತವು ಬಿಟ್ಟಕೊಡಲು ಒಪ್ಪದ) ಚೀನಾ ದೇಶವು ಇನ್ನೂ ಹಿಡಿದಿಟ್ಟುಕೊಂಡಿದೆ. ಇಂತಹ ಆಯಕಟ್ಟಿನ ಜಾಗಗಳಲ್ಲಿ ಮಾದರಿ ಗ್ರಾಮಗಳ ನಿರ್ಮಾಣವನ್ನು ಚೀನಾ ಮುಂದುವರಿಸಿದೆ ಎಂದು ತಿಳಿದುಬಂದಿದೆ.

ಗುಪ್ತಚರ ವರದಿ ಹೇಳಿದ್ದೇನು?
ಗುಪ್ತಚರ ಮಾಹಿತಿಯ ಪ್ರಕಾರ, ಚೀನಾ ಗಡಿಯುದ್ದಕ್ಕೂ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ, ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಸುರಂಗಗಳನ್ನು ನಿರ್ಮಿಸಿದೆ ಮತ್ತು ಗಡಿಗಳ ಬಳಿ ತನ್ನ ಶಕ್ತಿಯನ್ನು ದ್ವಿಗುಣಗೊಳಿಸಿದೆ.
ಅರುಣಾಚಲ ಗಡಿ ಭಾಗಗಳಲ್ಲಿ ಭಾರತೀಯ ಸೇನೆಯು ತನ್ನ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ. ಆದರೆ, ಈ ಗಡಿ ಭಾಗಗಳಿಗೆ ಸ್ಪಲ್ಪ ದೂರದಲ್ಲಿ ಚೀನಾ ದೇಶದವು ಸೇತುವೆ ಸೇರಿದಂತೆ ಹೊಸ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಈ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ಹೇಳಿವೆ. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಿದೆ.
ಚೀನಾದ ನಿರ್ಮಾಣ ಕಾರ್ಯಗಳ ಮೇಲೆ ಭಾರತ ನಿಗಾ ಇರಿಸಿದ್ದು, ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುತ್ತಿದೆ ಎಂದು ಅನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಅಮೆರಿಕದ ಪ್ಲಾನೆಟ್ ಲ್ಯಾಬ್ಸ್ ಚಿತ್ರಗಳು ಹೇಳುವುದೇನು?
ಡೋಕ್ಲಾಮ್ ಸಮೀಪದ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಚಟುವಟಿಕೆಯ ಬಗ್ಗೆ ವರದಿಗಳಾಗಿವೆ. ಅಮೆರಿಕ ಮೂಲಕ ಬಾಹ್ಯಾಕಾಶ ಸಂಸ್ಥೆ ಪ್ಲಾನೆಟ್ ಲ್ಯಾಬ್ಸ್‌ನಿಂದ ಪ್ರಕಟಗೊಂಡಿರುವ ಉಪಗ್ರಹ ಚಿತ್ರಗಳು ಇದನ್ನು ದೃಢೀಕರಿಸಿದೆ.
ಭಾರತ-ಭೂತಾನ್-ಚೀನಾ ಟ್ರೈ ಜಂಕ್ಷನ್‌ನಿಂದ ಸುಮಾರು 9 ಕಿ.ಮೀ ದೂರದಲ್ಲಿ ಚೀನಾ ಭೂತಾನ್ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಲೇ ಇದೆ. ಪಂಗ್ಡಾ ಗ್ರಾಮವು 2020 ರಲ್ಲಿ ಸ್ಥಾಪನೆಯಾಗಿದೆ. 2021 ರಲ್ಲಿ ಈ ಗ್ರಾಮವು ವಿಸ್ತರಣೆಗೊಂಡಿದೆ. ತೋರ್ಸಾ ಜಲಮೂಲದ ಮೇಲೆ ಸೇತುವೆಯ ಜೊತೆಗೆ ಹೊಸ ಕಟ್ಟಡಗಳು ತಲೆ ಎತ್ತಿರುವುದು ಕಂಡುಬಂದಿದೆ.

ಚಿಕನ್ ನೆಕ್‌ನಲ್ಲಿಯೂ ಚೀನಾ ಕಾರ್ಯಚಟುವಟಿಕೆ
ಚಿಕನ್ ನೆಕ್ ಎಂದೂ ಕರೆಯಲ್ಪಡುವ ಸಿಲಿಗುರಿ ಕಾರಿಡಾರ್‌ಗೆ ಸಮೀಪ ಚೀನಾದ ನಿರ್ಮಾಣಗಳ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇದು ಕಿರಿದಾದ ಕಾರಿಡಾರ್ ಆಗಿದ್ದು, ಕೇವಲ 22 ಕಿಮೀ ವ್ಯಾಪಿಸಿದೆ. ದೇಶದ ಉಳಿದ ಭಾಗಗಳೊಂದಿಗೆ ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುತ್ತದೆ.
ಉತ್ತರದ ಗಡಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಲ್ಯಾಂಗ್‌ಮಾರ್ಪೋ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಹೊಸ ಹಳ್ಳಿಗಳು ತಲೆ ಎತ್ತುತ್ತಿವೆ. ಭೂತಾನ್ ಪ್ರದೇಶದಲ್ಲಿ ಚೀನಾದಿಂದ ಸ್ಥಾಪಿಸಲಾಗುತ್ತಿರುವ ಹಳ್ಳಿಗಳ ನಿರ್ಮಾಣ ಕಾರ್ಯ ಮುಂದುವರಿದಿದೆ. ಸೈಬುರು, ಕೈತಾಂಗ್ಶಾ ಮತ್ತು ಕುಲೆ ಎಂಬ ಪ್ರದೇಶಗಳಲ್ಲಿ ಈ ಕಾರ್ಯಚಟುವಟಿಕೆ ಪ್ರಗತಿಯಲ್ಲಿದೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ಗ್ರಾಮ ನಿರ್ಮಾಣ
ಅರುಣಾಚಲ ಪ್ರದೇಶ ಗಡಿಯಲ್ಲಿರುವ ಉಪರಿ ಸುಬನಸಿರಿ ಎಂಬ ಪ್ರದೇಶದಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸಿದೆ ಎಂಬುದರ ಬಗ್ಗೆ ವರದಿಯಾಗಿತ್ತು. ಇದಕ್ಕೆ, ಹಿಂದೆಯೇ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ ಈ ಪ್ರದೇಶವನ್ನು 1960ರಿಂದ ಚೀನಾ ಅತಿಕ್ರಮಿಸಿಕೊಂಡಿದೆ ಎಂದು ಹೇಳಿತ್ತು.
ಚೀನಾ ದೇಶದ ಸೈನಿಕರು ಭಾರತದ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವಿಚಾರವೀಗ ಕಲ್ಲೋಲವನ್ನು ಸೃಷ್ಟಿಸಿದೆ. ಚೀನಾದ ಅತಿಕ್ರಮಣ ಹಾಗೂ ಮೊಂಡಾಟವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಿಯಾಗಿ ಎದುರಿಸುತ್ತಿಲ್ಲ. ಚೀನಾ ದೇಶವು ಯುದ್ದಕ್ಕೆ ಸಿದ್ಧತೆ ನಡೆಸುತ್ತಿರುವಾಗ, ಮೋದಿ ಸರ್ಕಾರ ನಿದ್ರಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ಈ ಹಿಂದೆಯೂ ಅರುಣಾಚಲ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ಭಾರತದ ಸುಮಾರು 20 ಯೋಧರನ್ನು ಚೀನಾ ಹತ್ಯೆ ಮಾಡಿತ್ತು.












Click it and Unblock the Notifications