ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'
ನವದೆಹಲಿ, ಆಗಸ್ಟ್ 26: ಕೇಂದ್ರದ ಮಾಜಿ ವಿತ್ತ, ಗೃಹ ಸಚಿವ ಪಿ ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿಸಿರುವ ಸಿಬಿಐ ವಿಚಾರಣೆಗೊಳಪಡಿಸಿದೆ. ಈ ನಡುವೆ ಐಎನ್ಎಕ್ಸ್ ಮೀಡಿಯಾ ಜೊತೆಗೆ ಏರ್ ಸೆಲ್ ಮ್ಯಾಕ್ಸಿಸ್, ವಿಮಾನ ಖರೀದಿ ಹಗರಣಗಳು ಚಿದು ಕೊರಳಿಗೆ ಸುತ್ತಿಕೊಂಡಿದೆ. ಸಿಬಿಐ ಜೊತೆಗೆ ಜಾರಿ ನಿರ್ದೇಶನಾಲಯವು ಕೂಡಾ ಕೋರ್ಟಿನಲ್ಲಿ ಚಿದು ವಿರುದ್ಧ ಸಾಕ್ಷಿ ಒದಗಿಸಿದೆ.
ಫೆಬ್ರವರಿ 17, 2018ರಲ್ಲಿ ಇಂದ್ರಾಣಿ ಅಪ್ರೂವರ್ ಆಗಿ CrPC ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಕಾರ್ತಿ ಚಿದಂಬರಂ ಹಾಗೂ ಪಿ ಚಿದಂಬರಂ ವಿರುದ್ಧ ಹೇಳಿಕೆ ದಾಖಲಿಸಿದ್ದರಿಂದ ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿದೆ. ಇಂದ್ರಾಣಿ ನೀಡಿರುವ ಇಮೇಲ್ ಸಾಕ್ಷಿ, ಹೋಟೆಲ್ ಹಯಾತ್ ನಲ್ಲಿ ಭೇಟಿ, ಚಿದಂಬರಂ ನೀಡಿದ ಸೂಚನೆ, ಮುಂತಾದ ಸಾಕ್ಷಿಗಳೇ ಸದ್ಯಕ್ಕೆ ಇಡಿ ಹಾಗೂ ಸಿಬಿಐಗೆ ಪ್ರಮುಖ ಅಸ್ತ್ರಗಳಾಗಿವೆ. ಇದೇ ಸಾಕ್ಷಿಯನ್ನು ಜಾರಿ ನಿರ್ದೇಶನಾಲಯವು ಈಗ ಸುಪ್ರೀಂಕೋರ್ಟ್ ಮುಂದಿಟ್ಟಿದೆ. ಆದರೆ, ಆಗಸ್ಟ್ 26ರ ತನಕ ಜಾರಿ ನಿರ್ದೇಶನಾಲಯವು ಚಿದಂಬರಂ ಅವರನ್ನು ಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಂತರ ಭದ್ರತೆ ನೀಡಿದೆ.
ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಮಾಧ್ಯಮ ಲೋಕದ ದೊರೆ ಪೀಟರ್ ಮುಖರ್ಜಿಯಾ ಹಾಗೂ ಪತ್ನಿ ಇಂದ್ರಾಣಿ ಮುಖರ್ಜಿಯಾ ಅವರ ಒಡೆತನದ ಐಎನ್ಎಕ್ಸ್ ಮೀಡಿಯಾಗೆ ನೆರವಾಗಿರುವ ಆರೋಪ ಹೊತ್ತುಕೊಂಡಿರುವ ಚಿದು ಹಾಗೂ ಕಾರ್ತಿಗೆ ತಲೆನೋವು ಹೆಚ್ಚಾಗಲಿದೆ. ಜಾರಿ ನಿರ್ದೇಶನಾಲಯವು ಈಗ ಸುಪ್ರೀಂಕೋರ್ಟಿನಲ್ಲಿ ಚಿದಂಬರಂ ವಿರುದ್ಧ ನೀಡಿರುವ ಸಾಕ್ಷಿಗಳು ಸಾಬೀತಾದರೆ, ಸಿಬಿಐ ನಂತರ 'ಇಡಿ' ಅಧಿಕಾರಿಗಳು ಮತ್ತೊಮ್ಮೆ ಚಿದಂಬರಂ ವಿಚಾರಣೆ ನಡೆಸಲಿದ್ದಾರೆ. ವಿದೇಶದಲ್ಲಿರುವ ಚಿದಂಬರಂ ಆಸ್ತಿ ಮುಟ್ಟುಗೋಲಿಗೂ ಸಿದ್ಧತೆ ನಡೆದಿದೆ ಎಂಬ ಸುದ್ದಿಯಿದೆ.

ಜಾರಿ ನಿರ್ದೇಶನಾಲಯ ಕೋರ್ಟಿನಲ್ಲಿ ಕೊಟ್ಟ ಮಾಹಿತಿ
ಚಿದಂಬರಂಗೆ ಸೇರಿದ 11 ಸ್ಥಿರಾಸ್ತಿ ಹಾಗೂ ವಿದೇಶದಲ್ಲಿರುವ 17 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. 305 ಕೋಟಿ ರು ಅವ್ಯವಹಾರ, 10 ಲಕ್ಷ ರು ಲಂಚಗಿಂತ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ತಿಳಿಸಿದೆ.
ಯಾರ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತೋ ಅವರುಗಳು ಚಿದಂಬರಂ ಮೊಮ್ಮಗಳ ಹೆಸರಿನಲ್ಲಿ ಉಯಿಲು ಬರೆದಿದ್ದಾರೆ ಎಂಬ ಹೊಸ ಅಂಶವನ್ನು ಇಡಿ ಅಧಿಕಾರಿಗಳು ಜಸ್ಟೀಸ್ ಆರ್ ಬಾನುಮತಿ ಹಾಗೂ ಎಸ್ಎಸ್ ಬೋಪಣ್ಣ ಅವರಿರುವ ನ್ಯಾಯಪೀಠದ ಮುಂದಿಟ್ಟಿದ್ದಾರೆ.

ಫೆಬ್ರವರಿ 17, 2018ರಂದು ಇಂದ್ರಾಣಿ ನೀಡಿದ ಹೇಳಿಕೆ
ಫೆಬ್ರವರಿ 17, 2018ರಂದು ಇಂದ್ರಾಣಿ ನೀಡಿದ ಹೇಳಿಕೆಯಂತೆ, ಐಎನ್ಎಕ್ಸ್ ಮೀಡಿಯಾದಲ್ಲಿ ಹೂಡಿಕೆ ಮಾಡಲು FIPB ಅನುಮತಿ ಸಿಕ್ಕಿರಲಿಲ್ಲ. ಅಂದಿನ ವಿತ್ತ ಸಚಿವ ಚಿದಂಬರಂ ನೆರವಿನಿಂದ ಐಎನ್ ಎಕ್ಸ್ ಮೀಡಿಯಾದಲ್ಲಿ ಎಫ್ ಡಿಐ ಸಾಧ್ಯವಾಯಿತು. ಈ ಬಗ್ಗೆ ಡೀಲ್ ಕುದುರಿಸಲು ಕಾರ್ತಿ ಚಿದಂಬರಂ ಅವರನ್ನು ಭೇಟಿ ಮಾಡಲು ಸೂಚಿಸಿದರು. ಅದರಂತೆ, ದೆಹಲಿಯ ಹೋಟೆಲ್ ಹಯಾತ್ ನಲ್ಲಿ ಕಾರ್ಯತಂತ್ರ ರೂಪಿಸಲಾಯಿತು. ಕಿಕ್ ಬ್ಯಾಕ್ ಗಳನ್ನು ಕಾರ್ತಿ ಒಡೆತನದ ಕಂಪನಿಗೆ ನೀಡಲಾಯಿತು. ಈ ಕುರಿತಂತೆ ಪೀಟರ್ ಮುಖರ್ಜಿ ಸಹಿ ಹಾಕಿರುವ ವೋಚರ್ ಗಳು ಸಿಕ್ಕಿದ್ದು, ಸಿಬಿಐ ಹಾಗೂ ಇಡಿ ತಂಡಗಳು ಇದನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

ಹಲವು ಬೇನಾಮಿ ಸಂಸ್ಥೆಗಳ ಬಗ್ಗೆ ವಿಚಾರಣೆ ಬಾಕಿ
ಹೋಟೆಲ್ ನಲ್ಲಿ ಆದ ಒಪ್ಪಂದದಂತೆ ಕಾರ್ತಿ ಹೇಳಿದ ಚೆಸ್ ಮ್ಯಾನೇಜ್ಮೆಂಟ್ ಗ್ಲೋಬಲ್ ಪ್ರೈ ಲಿಮಿಟೆಡ್ ಯನ್ನು ಮಧ್ಯವರ್ತಿಯಾಗಿ ಇಟ್ಟುಕೊಂಡು ಅಡ್ವಾನ್ಟೇಂಟ್ ಸ್ಟ್ರಾಟರ್ಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್(ಎಎಸ್ ಸಿ ಪಿಎಲ್) ಸಂಸ್ಥೆಗೆ ಲಕ್ಷ ರು ಕಿಕ್ ಬ್ಯಾಕ್ ಮೊತ್ತವನ್ನು ಐಎನ್ ಎಕ್ಸ್ ಮೀಡಿಯಾ ಲಿಮಿಟೆಡ್ ಸಂದಾಯ ಮಾಡಿದೆ. ಈ ಕುರಿತಂತೆ ಲೆಡ್ಜರ್ ನಲ್ಲಿ ನಮೂದಿಸಲಾಗಿದೆ. ಹಣ ಪಾವತಿ ಬಗ್ಗೆ ಚೆಸ್ ಮ್ಯಾನೇಜ್ಮೆಂಟ್ ಗ್ಲೋಬಲ್ ಸಂಸ್ಥೆ ಹಾಗೂ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ನಡುವೆ 200 ಇಮೇಲ್ ಗಳು ಹರಿದಾಡಿವೆ.

300 ಕೋಟಿ ರು ಅವ್ಯವಹಾರ
ವಿದೇಶದಿಂದ ನೇರವಾಗಿ ಬಂಡವಾಳ ಹೂಡಿಕೆ ಅನುಮತಿ ಪಡೆದ ಐಎನ್ ಎಕ್ಸ್ ಮೀಡಿಯಾಕ್ಕೆ ಶೇ 26ರಷ್ಟು ಹೂಡಿಕೆಯನ್ನು ಐಎನ್ ಎಕ್ಸ್ ನ್ಯೂಸ್ ನಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದು ಹೂಡಿಕೆ ಕಷ್ಟವಾಗುತ್ತದೆ. ನಂತರ ಕಾರ್ತಿ ಎಂಟ್ರಿಯಾಗಿ 4.6 ಕೋಟಿ ರು ಹೂಡಿಕೆಗೆ FIPB ಅನುಮತಿ ಪಡೆದು 300 ಕೋಟಿ ವಿದೇಶಿ ಹೂಡಿಕೆ ಪಡೆಯಲಾಗಿದೆ ಎಂಬುದು ಆರೋಪ. ಈ ಡೀಲ್ ಪೂರ್ಣಗೊಳಿಸಲು ಮಧ್ಯವರ್ತಿ ಸಂಸ್ಥೆ, ಕಿಕ್ ಬ್ಯಾಕ್ ಪಡೆಯಲು ಬೇನಾಮಿ ಸಂಸ್ಥೆಯನ್ನು ಕಾರ್ತಿ ಸೂಚಿಸಿದ್ದರು ಎಂಬ ಆರೋಪವಿದೆ.

ಏನಿದು ಐಎನ್ಎಕ್ಸ್ ಹಗರಣ
ಏನಿದು ಪ್ರಕರಣ?: ಯುಪಿಎ 1 ಅಧಿಕಾರದಲ್ಲಿದ್ದಾಗ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು 2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ಸುಮಾರು 305 ಕೋಟಿ ರುಗಳನ್ನು ವಿದೇಶದಿಂದ ಹೂಡಿಕೆ ರೂಪದಲ್ಲಿ ಪಡೆಯಲು ಅನುಮತಿ ದೊರಕಿಸಿಕೊಟ್ಟಿದ್ದರು. 2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು. ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು.