RV Road-Bommasandra Metro: 11ನೇ ಡ್ರವರ್ ಲೆಸ್ ರೈಲು ಆಗಮನ, ಮೇ 15ರಿಂದ ಹೊಸ ರೈಲು ಸಂಚಾರ?
ಬೆಂಗಳೂರು: ರಾಜಧಾನಿಯಲ್ಲಿ ಒಂದು ಕಡೆ ನಮ್ಮ ಮೆಟ್ರೋ ಜಾಲ ವಿಸ್ತರಿಸುತ್ತಿದ್ದರೆ, ಮತ್ತೊಂದೆಡೆ ಹಾಲಿ ಮಾರ್ಗಕ್ಕೆ ಹೊಸ ಹೊಸ ರೈಲುಗಳು ಸರಣಿಯಾಗಿ ಆಗಮಿಸುತ್ತಿವೆ. ಒಂದರ ಹಿಂದೊಂದರಂತೆ ಸೇವೆಗೆ ಅಣಿಯಾಗಲಿವೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗದಲ್ಲಿ ಎಂಟು ರೈಲುಗಳು ಸಂಚರಿಸುತ್ತಿದ್ದು, ಇದೀಗ 11ನೇ ಡ್ರೈವರ್ ಲೆಸ್ ರೈಲು ಆಗಮಿಸಿದೆ. ಶೀಘ್ರವೇ ಎಲ್ಲ ರೈಲುಗಳು ಸೇವೆಗೆ ನಿಯೋಜನೆಗೊಳ್ಳಲಿದ್ದು, ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಗಲಿದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ 19.15 ಕಿಲೋ ಮೀಟರ್ ಯೆಲ್ಲೋ ಮಾರ್ಗವು 11ನೇ ಡ್ರೈವರ್ ಲೆಸ್ ರೈಲನ್ನು ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ರವಾನಿಸ್ಪಟ್ಟ ಈ ಆರು ಬೋಗಿಗಳು ರೈಲು ಸೆಟ್ ಭಾನುವಾರ ನಗರದ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ನೆಟ್ಟಿಗರು ಹಂಚಿಕೊಂಡಿದ್ದಾರೆ.

ಮೆಟ್ರೋ ಬೋಗಿಗಳನ್ನು ಹೊತ್ತ ಲಾರಿಯು ನೈಸ್ ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸಿದೆ. ಇಂದು ಸೋಮವಾರ (ಮೇ 11) ಲಾರಿಯಿಂದ ಮೆಟ್ರೋ ಬೋಗಿಗಳನ್ನು ಇಳಿಸಿ ಹಳಿಗೆ ಜೋಡಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ ಈಗಾಗಲೇ ಬಂದ 9 ಮತ್ತು 10ನೇ ಡ್ರೈವರ್ ಲೆಸ್ ರೈಲುಗಳ ಶಾಸನಬದ್ಧ ಪರೀಕ್ಷೆಗಳು, ಪ್ರಾಯೋಗಿಕ ಸಂಚಾರ ಎಲ್ಲವು ನಡೆಯುತ್ತಿದೆ. ಶೀಘ್ರವೇ ಆಗಮಿಸಿದ ಹೊಸ ಹನ್ನೊಂದನೇ ಮೆಟ್ರೋ ಸಹ ವಿವಿಧ ಪರೀಕ್ಷೆಗಳಿಗೆ ಒಳಗಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಮೂಲಗಳು ತಿಳಿಸಿವೆ.
ಮೇ 15ಕ್ಕೆ ಹೊಸ ರೈಲು ಸೇವೆಗೆ ನಿಯೋಜನೆ
ಬಿಎಂಆರ್‌ಸಿಎಲ್ ಸದರಿ ಹಳದಿ ಮಾರ್ಗದಲ್ಲಿ ಕೇವಲ ಎಂಟು ರೈಲುಗಳನ್ನು ಓಡಿಸುತ್ತಿದೆ. ಒಂದನ್ನು ಕಾಯ್ದಿರಿಸಿಕೊಂಡಿರುತ್ತದೆ. ಹೊಸ ಒಂಬತ್ತನೇ ರೈಲಿನ ಪ್ರಯೋಗಗಳು ನಡೆಯುತ್ತಿದ್ದು, ತಪಾಸಣೆ ಮುಗಿದಿವೆ ಎನ್ನಲಾಗಿದೆ. ಇದೇ ಮೇ 15ಕ್ಕೆ ವಾಣಿಜ್ಯ ಸೇವೆಗೆ ನಿಯೋಜಿಸುವ ಸಾಧ್ಯತೆ ಇದೆ.
ಅದೇ ರೀತಿ ಹತ್ತನೇ ರೈಲಿನ ವಿವಿಧ ಪರೀಕ್ಷೆಗಳು, ಸಿಗ್ನಲಿಂಗ್, ದಕ್ಷತೆ, ಕಾರ್ಯಕ್ಷಮತೆ ಸೇರಿ ಶಾಸನಬದ್ಧ ಪರೀಕ್ಷೆಗಳು ನಡೆಯುತ್ತಿವೆ. ಮೇ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆ ರೈಲು ಸಹ ಮೇ ಅಂತ್ಯ ಇಲ್ಲವೇ ಜೂನ್ ಮೊಲದ ವಾರ ಅಧಿಕೃತವಾಗಿ ಸೇವೆ ನೀಡುವ ಭರವಸೆ ಇದೆ. ಜೂನ್ 2026ರ ಹೊತ್ತಿಗೆ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳಾಗಲಿವೆ. ಜೂನ್ ಮಧ್ಯ ಇಲ್ಲವೇ ತಿಂಗಳಾಂತ್ಯಕ್ಕೆ 11ನೇ ರೈಲು ತನ್ನಲ್ಲ ಪರೀಕ್ಷೆಗಳನ್ನು ಮುಗಿಸಿ ಕಾರ್ಯಾಚರಣೆಗೆ ಅಣಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಸಂಚಾರ ದಟ್ಟಣೆ; ಒತ್ತಡ ಕಡಿಮೆ
ಸದ್ಯ 9-15 ನಿಮಿಷಗಳ ಅಂತರದಲ್ಲಿ ಎಂಟು ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸುತ್ತವೆ. ಎಲ್ಲ ರೈಲುಗಳ ಸಂಚಾರದಿಂದ ರೈಲುಗಳಿಗಾಗಿ ಕಾಯುವ ಸಮಯ 5-6 ನಿಮಿಷಕ್ಕೆ ಇಳಿಕೆ ಆಗಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆಯ ಒತ್ತಡ ಕಡಿಮೆ ಆಗಲಿದೆ. ಎಲೆಕ್ಟ್ರಾನಿಕ್ ಸಿಟಿಯಂತಹ ಕೈಗಾರಿಕೆ ಕಾರಿಡಾರ್‍ಗೆ ಈ ಮೆಟ್ರೋ ಮಾರ್ಗ ಸಂಪರ್ಕ ಕಲ್ಪಿಸುವ ಕಾರಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪೀಕ್ ಅವರ್‍ನಲ್ಲಿ ಸಂಚಾರ ಒತ್ತಡ ನಿರ್ಮಾಣವಾಗುತ್ತಿದ್ದು, ರೈಲುಗಳು ತುಂಬಿ ತುಳುಕುತ್ತಿರುತ್ತವೆ. ಹತ್ತು ರೈಲುಗಳ ಸಂಚಾರ ಆರಂಭವಾದರೆ ಈ ಒತ್ತಡ ತಕ್ಕಮಟ್ಟಿಗೆ ಕಡಿಮೆ ಆಗುತ್ತದೆ. ನಿಲ್ದಾಣದಲ್ಲಿ ರೈಲಿಗೆ ಕಾಯುವ ಸಮಯ ಸಹ ತಗ್ಗುತ್ತದೆ. ಈ ಮಾರ್ಗದಲ್ಲಿ ನಿತ್ಯ ಸುಮಾರು ಒಂದು ಲಕ್ಷ ಮಂದಿ ಸಂಚಾರ ಮಾಡುತ್ತಿದ್ದಾರೆ.













Click it and Unblock the Notifications