ಚಿಕನ್ ಬಿರಿಯಾನಿ ತಂದ ಆಪತ್ತು: ಬಿರಿಯಾನಿ ತಿಂದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಓರ್ವ ಸಾವು
ತಿರುವರೂರು ಅಕ್ಟೋಬರ್ 7: ಚಿಕನ್ ಬಿರಿಯಾನಿ ತಿಂದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು 20ಕ್ಕೂ ಹೆಚ್ಚು ಮಂದಿ ವಾಂತಿ, ಹೊಟ್ಟೆ ನೋವು ಜೊತೆಗೆ ಪ್ರಜ್ಞೆ ತಪ್ಪಿದ್ದಾರೆ. ಜೊತೆಗೆ ಈ ಪೈಕಿ 6 ಮಂದಿಯನ್ನು ತಮಿಳುನಾಡಿನ ತಿರುವರೂರು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಮೃತ ದುರ್ದೈವಿ ವೆಲಂಗುಡಿಯ ಸೆಲ್ವಮುರುಗನ್ ಎಂದು ಗುರುತಿಸಲಾಗಿದೆ.
ತಿರುವಾರೂರು ಸಮೀಪದ ತಿರುವಾಸಲ್ ಪ್ರದೇಶದ ಚೆಲತುರೈ ಅವರ ಪುತ್ರ ವಿಘ್ನೇಶ್ ಅವರ ಪತ್ನಿ 5 ತಿಂಗಳ ಗರ್ಭಿಣಿ. ವಿಘ್ನೇಶ್ ಅವರ ಮನೆಯಲ್ಲಿ ಪತ್ನಿ ಮರಿಯಮ್ಮಳ್ (26) ಅವರ ಸೀಮಂತ ಕಾರ್ಯಕ್ರಮ ನಿನ್ನೆ ನಡೆದಿತ್ತು.
ವಿಘ್ನೇಶ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ 5 ಬಗೆಯ ಮಿಶ್ರ ಅನ್ನದೊಂದಿಗೆ ಬಿರಿಯಾನಿಯನ್ನು ಬಡಿಸಲಾಯಿತು. ಈ ಪಾರ್ಟಿಯಲ್ಲಿ ಊಟ ಮಾಡಿದ ಕೆಲವೇ ಸಮಯದಲ್ಲಿ 20ಕ್ಕೂ ಹೆಚ್ಚು ಮಂದಿ ವಾಂತಿ, ಮೂರ್ಛೆ ಮುಂತಾದ ದೈಹಿಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ನಂತರ ಅವರನ್ನು ತಿರುವರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ 12 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆದರೆ 6 ಮಂದಿಯನ್ನು ತಿರುವರೂರು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಗರ್ಭಿಣಿ ಮಹಿಳೆಗೆ ಚಿಕಿತ್ಸೆ
ವೇಲಂಗುಡಿ ಮೂಲದ ಸೆಲ್ವಮುರುಗನ್(24), ಚಂಡೂರು(10) ಇಲಾರ (6) ಸೆಲ್ವಗಣಪತಿ(25) ಬಾಲಾಜಿ (22) ರಾಜಮಾಣಿಕ್ಕಂ (60) ಜೊತೆಗೆ ಗರ್ಭಿಣಿ ಮರಿಯಮ್ಮಳ್ ಹಾಗೂ 4 ವರ್ಷದ ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ವೆಲಂಗುಡಿಯ ಸೆಲ್ವಮುರುಗನ್ 24 ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸ್ ತನಿಖೆ ಚುರುಕು
ಈ ಹಿಂದೆ ತಿರುಪುರದ ಮಕ್ಕಳ ಡೇ ಕೇರ್ ಸೆಂಟರ್‌ನಲ್ಲಿ ಹಾಳಾದ ಆಹಾರ ಸೇವಿಸಿ 3 ಮಕ್ಕಳು ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದರು. ಹೀಗಿರುವಾಗ ತಿರುವರೂರು ಜಿಲ್ಲೆಯಲ್ಲಿ ಚಿಕನ್ ಬಿರಿಯಾನಿ ತಿಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಆಘಾತವನ್ನುಂಟು ಮಾಡಿದೆ. ತಿರುವರೂರು ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಹಾರದ ಗುಣಮಟ್ಟ ಪರಿಶೀಲನೆಗೆ ಸೂಚನೆ
ಸಾರ್ವಜನಿಕ ಔತಣಕೂಟಗಳಲ್ಲಿ ಪಾಲ್ಗೊಳ್ಳುವವರಿಗೆ ಅಡುಗೆ ಮಾಡುವವರು ಅನೇಕರ ಜೀವನವನ್ನು ಪರಿಗಣಿಸಿ ಅಡುಗೆ ಮಾಡಬೇಕು. ಗುಣಮಟ್ಟವಿಲ್ಲದ ಪದಾರ್ಥಗಳಿಂದ ಬೇಯಿಸಿದರೆ ಆಹಾರ ಕೆಡುವ ಸಾಧ್ಯತೆ ಇದೆ. ಅದೂ ಅಲ್ಲದೆ ಪಾರ್ಟಿಗೆ ಬೇಗ ಅಡುಗೆ ಮಾಡಿದರೂ ಆಹಾರ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಔತಣ ಬಡಿಸುವ ಮುನ್ನ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕೆಂಬ ಆಗ್ರಹವಿದೆ. ಈ ಮೂಲಕ ಪ್ರಾಣಹಾನಿ ತಪ್ಪಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತರು ಕೂಡ ಹೇಳಿದ್ದಾರೆ.

ವಿಚಾರಣೆ ಆರಂಭಿಸಿದ ಪೊಲೀಸರು
ಘಟನೆಯಲ್ಲಿ ಆಹಾರ ತಯಾರಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆಹಾರ ತಯಾರಿಯಲ್ಲಿ ಲೋಪಗಳಿದ್ದರೆ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಹಾರ ತಯಾರಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಿರಿಯಾನಿ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳ ಪರಿಶೀಲನೆ ಕೂಡ ಮಾಡಲಾಗುತ್ತಿದೆ ಎಂದು ಪೊಲಿಸರು ತಿಳಿಸಿದ್ದಾರೆ.












Click it and Unblock the Notifications