Chennai: ರೋಗಿಯ ಮಗನಿಂದ ವೈದ್ಯನಿಗೆ 7 ಬಾರಿ ಇರಿತ; ವ್ಯಾಪಕ ಆಕ್ರೋಶ
ತನ್ನ ತಾಯಿಯ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರಿಗೆ ಮಗ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಚೆನ್ನೈನ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಾಲಾಜಿ ಎನ್ನುವವರ ಮೇಲೆ ಯುವಕನೊಬ್ಬ ಚಾಕುವಿನಂದ ದಾಳಿ ಮಾಡಿದ್ದಾನೆ. ತಮಿಳುನಾಡು ರಾಜ್ಯದಲ್ಲಿ ಈ ಘಟನೆ ಕೋಲಾಹಲವನ್ನೇ ಸೃಷ್ಟಿಸಿದೆ. ಮುಖ್ಯಮಂತ್ರಿ ಸ್ಟಾಲಿನ್ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ಪ್ರತಿಪಕ್ಷಗಳು ಡಿಎಂಕೆ ಸರ್ಕಾರವನ್ನು ಟೀಕಿಸಿವೆ.
ಆರೋಪಿಯನ್ನು ಚೆನ್ನೈ ನಿವಾಸಿ ವಿಘ್ನೇಶ್ ಎಂದು ಗುರುತಿಸಲಾಗಿದೆ. ಸದ್ಯ ಯುವಕನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಘ್ನೇಶ್ ತಾಯಿ ಕ್ಯಾನ್ಸರ್ ರೋಗಿಯಾಗಿದ್ದು ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಮತ್ತೊಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ತಾಯಿಗೆ ಈ ಹಿಂದೆ ವೈದ್ಯ ಡಾ.ಬಾಲಾಜಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎನ್ನುವ ಕೋಪದಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಬುಧವಾರ ಕಲೈಂಜರ್ ಸೆಂಟಿನರಿ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್‌ಗೆ ತೆರಳಿದ ವಿಘ್ನೇಶ್ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ವೈದ್ಯರ ಮೇಲೆ ದಾಳಿ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ
ವೈದ್ಯರ ಮೇಲೆ ದಾಳಿ ಬಗ್ಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದು, ಗಾಯಾಳು ವೈದ್ಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಮತ್ತು ಘಟನೆ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸೂಚನೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
"ಗಿಂಡಿ ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಾಲಾಜಿ ಅವರಿಗೆ ರೋಗಿಯ ಕುಟುಂಬದ ಸದಸ್ಯರು ಚಾಕುವಿನಿಂದ ಇರಿದಿರುವುದು ಆಘಾತಕಾರಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ತಕ್ಷಣವೇ ಬಂಧಿಸಲಾಗಿದೆ. ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಲು ಆದೇಶಿಸಿದ್ದೇನೆ" ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು.
ಈಗ ಯುವಕ ತಾಯಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಮಾತುಗಳಿಂದ ಆತ ದಾರಿ ತಪ್ಪಿದ್ದಾನೆ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ವೈದ್ಯರ ಆರೋಗ್ಯದ ಬಗ್ಗೆ ಸಿಎಂ ಮತ್ತು ಆರೋಗ್ಯ ಸಚಿವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವೈದ್ಯರ ವಿರುದ್ಧದ ದಾಳಿಯಲ್ಲಿ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು. ವೈದ್ಯರು, ನರ್ಸ್‌ಗಳು, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲವು ಬಾರಿ ಹಲ್ಲೆ ನಡೆದರೂ ಡಿಎಂಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಇಂತಹ ಅಹಿತಕರ ಘಟನೆ ನಡೆದಾಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತದೆ, ಆದರೆ ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದರು.












Click it and Unblock the Notifications