ಚೆನ್ನೈ-ಕೊಲಂಬೋ ವಿಮಾನದಲ್ಲಿ ಉಗ್ರರು! ವಿಮಾನ ನಿಲ್ದಾಣದಲ್ಲಿ ಭಾರಿ ಶೋಧ
ಐದು ಶಂಕಿತ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರು ವಿಮಾನದಲ್ಲಿದ್ದಾರೆ ಎನ್ನುವ ಮಾಹಿತಿಯ ಬಳಿಕ ಚೆನ್ನೈನಿಂದ ಬಂದ ಶ್ರೀಲಂಕಾ ಏರ್‌ಲೈನ್ಸ್ ವಿಮಾನವನ್ನು ಕೊಲಂಬೊದ ಬಂಡರಾನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೋಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 22 ರ ಪಹಲ್ಗಾಮ್ ದಾಳಿಯ ನಂತರ ದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದರೂ ಐದು ಲಷ್ಕರ್ ಕಾರ್ಯಕರ್ತರು ಶ್ರೀಲಂಕನ್ ಏರ್‌ಲೈನ್ಸ್ ವಿಮಾನದಲ್ಲಿದ್ದಾರೆ ಎಂದು ಹೇಳುವ ಬೆದರಿಕೆ ಇಮೇಲ್ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಬಂದ ನಂತರ ಭದ್ರತೆಯನ್ನು ಹೆಚ್ಚಿಸಲಾಯಿತು.

ಅನಾಮಧೇಯ ಬೆದರಿಕೆ ಮೇಲ್ ಅನ್ನು ಮುಖ್ಯ ಭದ್ರತಾ ಅಧಿಕಾರಿಗೆ ಬೆಳಿಗ್ಗೆ 11.05 ಕ್ಕೆ ಕಳಿಸಲಾಗಿದೆ. ಅದರಲ್ಲಿ "ಯುಎಲ್ 122 ನಲ್ಲಿರುವ ಐದು ದಕ್ಷಿಣ ಭಾರತೀಯ ಪುರುಷರು ಲಷ್ಕರ್ ಕಾರ್ಯಕರ್ತರಾಗಿದ್ದಾರೆ. ಉತ್ತಮ ತರಬೇತಿ ಪಡೆದವರಾಗಿದ್ದು, ಯಾವುದೇ ಅನುಮಾನವಿಲ್ಲ" ಎಂದು ಉಲ್ಲೇಖಿಸಲಾಗಿದೆ.
ಇಮೇಲ್ ಸ್ವೀಕರಿಸುವ ಹೊತ್ತಿಗೆ, ವಿಮಾನವು ಈಗಾಗಲೇ ಹೊರಟಿತ್ತು. ಈ ಮಾಹಿತಿಯನ್ನು ಕೊಲಂಬೊ ವಿಮಾನ ನಿಲ್ದಾಣಕ್ಕೆ ರವಾನಿಸಲಾಯಿತು, ಅಲ್ಲಿ ಸಂಪೂರ್ಣ ಭದ್ರತಾ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಿಲ್ಲ, ಇದು ಹುಸಿ ಬೆದರಿಕೆ ಎಂದು ಮಾಹಿತಿ ನೀಡಲಾಗಿದೆ.
ಶ್ರೀಲಂಕನ್ ಏರ್ ಲೈನ್ಸ್ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು ಬಳಿಕ ಮುಂದಿನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತಕ್ಕೆ ಬೇಕಾಗಿರುವ ಶಂಕಿತನೊಬ್ಬ ವಿಮಾನದಲ್ಲಿದ್ದಾನೆ ಎಂದು ನಂಬಲಾದ ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರದ ಎಚ್ಚರಿಕೆಯ ನಂತರ ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಶೋಧ ನಡೆಸಲಾಯಿತು ಎಂದು ಹೇಳಿಕೆ ನೀಡಲಾಗಿದೆ.
ಪಹಲ್ಗಾಮ್ ದಾಳಿ ಉಗ್ರರಿಗಾಗಿ ಶೋಧ
ಏಪ್ರಿಲ್ 22 ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬರಿಸನ್ ಕಣಿವೆಯಲ್ಲಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿದ್ದಾರೆ. ದಾಳಿಕೋರರಿಗಾಗಿ ಬೃಹತ್ ಶೋಧ ಕಾರ್ಯ ನಡೆಯುತ್ತಿದ್ದರೂ ಇನ್ನೂ ಉಗ್ರರನ್ನು ಸೆರೆಹಡಿಯಲು ಸಾಧ್ಯವಾಗಿಲ್ಲ.
ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಭಾರತ ಮುಂದಾಗಿದ್ದು, ಪಾಕಿಸ್ತಾನಿಯರ ವೀಸಾ ರದ್ದುಗೊಳಿಸಿದ್ದು ವಾಪಸ್ ಕಳಿಸಿದೆ. ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಿದೆ, ಭೂ ಗಡಿಗಳನ್ನು ಮುಚ್ಚಿದೆ, ಪಾಕ್ ಜೊತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.












Click it and Unblock the Notifications