Chennai-Bengaluru Expressway: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ದಿನಾಂಕ ಮುಂದೂಡಿಕೆ-ಕಾರಣ ಏನು?
Chennai-Bengaluru Expressway: ಬಹುನಿರೀಕ್ಷಿತ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಮುಕ್ತಾಯದ ಹಂತದಲ್ಲಿದ್ದು, ಇದು ಈ ವರ್ಷವೇ ಅಂದರೆ 2024ರ ಡಿಸೆಂಬರ್‌ನಲ್ಲೇ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಉದ್ಘಟನೆ ದಿನಾಂಕವನ್ನು ಮತ್ತೆ 2025ಕ್ಕೆ ಮುಂದೂಡಲಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೂಲಗಳ ಪ್ರಕಾರ ಈ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ನೀಡಲಾಗಿದ್ದ ದಿನಾಂಕವನ್ನು ಮುಂಡೂಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೆನ್ನೈ ಮತ್ತು ಬೆಂಗಳೂರು ಎಕ್ಸ್‌ಪ್ರೆಸ್ ವೇ 262 ಕಿಲೋಮೀಟರ್‌ಗಳಷ್ಟು ವ್ಯಾಪಿಸಿದ್ದು, ಇದರಿಂದ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯ 2 ಗಂಟೆಗಳು ಕಡಿತವಾಗಲಿದೆ. ಅಲ್ಲದೆ, ಎರಡು ನಗರಗಳ ನಡುವಿನ ಅಂತರವನ್ನು 38 ಕಿಲೋ ಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ. ಇಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮೂರು ಪ್ಯಾಕೇಜ್‌ಗಳಲ್ಲಿ ಕೆಲವು ಸಣ್ಣ ಸೇತುವೆ ಕಾಮಗಾರಿಗಳನ್ನು ಹೊರತುಪಡಿಸಿ ಒಟ್ಟು 71 ಕಿಲೋ ಮೀಟರ್ ಪೂರ್ಣಗೊಂಡಿವೆ. ಇನ್ನು ಆಂಧ್ರಪ್ರದೇಶ 85 ಕಿಲೋ ಮೀಟರ್ ಮತ್ತು ತಮಿಳುನಾಡು ಭಾಗದಲ್ಲಿ 106 ಕಿಲೋ ಮೀಟರ್ ಆಗಿದ್ದು, ಇದರ ಪ್ರಗತಿಯು ನಿಧಾನವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಮೂರು ಪ್ಯಾಕೇಜ್‌ಗಳಲ್ಲಿ ಒಟ್ಟು 71 ಕಿಲೋ ಮೀಟರ್ ಬಹುತೇಕ ಪೂರ್ಣಗೊಂಡಿವೆ, ಸಣ್ಣ ಪುಟ್ಟ ಕಾಮಗಾರಿಗಳುಗಳು ಮಾತ್ರ ಬಾಕಿಯಿವೆ. ಪ್ಯಾಕೇಜ್ 1ನ್ನು ನೋಡುವುದಾದರೆ, ದಿಲೀಪ್ ಬಿಲ್ಡ್‌ಕಾನ್ ನಿರ್ವಹಿಸುತ್ತಿರುವ ಹೊಸಕೋಟೆಯಿಂದ ಮಾಲೂರಿಗೆ 26 ಕಿಲೋ ಮೀಟರ್, ಪ್ಯಾಕೇಜ್ 2: ಮಾಲೂರಿನಿಂದ ಬಂಗಾರಪೇಟೆಗೆ 27 ಕಿಲೋ ಮೀಟರ್, ಪ್ಯಾಕೇಜ್ 3: ಬಂಗಾರಪೇಟೆಯಿಂದ ಬೇತಮಂಗಲದವರೆಗೆ 18 ಕಿಲೋ ಮೀಟರ್ ಅಂದರೆ ಶೇಕಡ 99ರಷ್ಟು ಪೂರ್ಣಗೊಂಡಿದೆ.
ಆಂಧ್ರ ಪ್ರದೇಶ ಪ್ಯಾಕೇಜುಗಳು: ಪ್ಯಾಕೇಜ್ 1: ಮಾಂಟೆಕಾರ್ಲೋ ನಿರ್ವಹಿಸುತ್ತಿರುವ ಬೇತಮಂಗಲದಿಂದ ಬೈರೆಡ್ಡಿಪಲ್ಲೆವರೆಗಿನ 25 ಕಿಲೋ ಮೀಟರ್ ಶೇಕಡ 65ರಷ್ಟು ಪೂರ್ಣಗೊಂಡಿದೆ. ಪ್ಯಾಕೇಜ್ 2: ಬೈರೆಡ್ಡಿಪಲ್ಲೆಯಿಂದ ಬಂಗಾರುಪಾಲೆಮ್‌ವರೆಗೆ 31 ಕಿಲೋ ಮೀಟರ್ ಶೇಕಡ 45ರಷ್ಟು, ಪ್ಯಾಕೇಜ್ 3: ದಿಲೀಪ್ ಬಿಲ್ಡ್‌ಕಾನ್ ಜವಾಬ್ದಾರಿ ಹೊತ್ತಿರುವ ಬಂಗಾರುಪಾಲೆಂನಿಂದ ಗುಡಿಪಾಲದವರೆಗಿನ 29 ಕಿಲೋ ಮೀಟರ್ ಶೇಕಡ 74ರಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳು ಮಾರ್ಚ್ 31, 2025ರ ವೇಳೆಗೆ ಪೂರ್ಣಗೊಳ್ಳಲಿವೆ.
ತಮಿಳುನಾಡು ಪ್ಯಕೇಜ್: ಪ್ಯಾಕೇಜ್ 1: ಮಾಂಟೆಕಾರ್ಲೋ ನಿರ್ವಹಿಸುತ್ತಿರುವ ಗುಡಿಪಾಲದಿಂದ ವಾಲಾಜಪೇಟೆಗೆ 24 ಕಿಲೋ ಮೀಟರ್ ಶೇಕಡ 62ರಷ್ಟು ಪೂರ್ಣಗೊಂಡಿದ್ದು, ಇದು ಡಿಸೆಂಬರ್ 31, 2024ಕ್ಕೆ ಮುಕ್ತಾಯವಾಗಲಿದೆ. ಪ್ಯಾಕೇಜ್ 2: ಕೆಸಿಸಿ ಬಿಲ್ಡ್‌ಕಾನ್ ಜವಾಬ್ದಾರಿವಹಿಸಿಕೊಂಡಿರುವ ವಾಲಾಜಾಪೇಟ್‌ನಿಂದ ಅರಕ್ಕೋಣಂವರೆಗಿನ 25 ಕಿಲೋ ಮೀಟರ್ ಶೇಕಡ 78ರಷ್ಟು ಕಾಮಾಗರಿ ಪೂರ್ಣಗೊಂಡಿದ್ದು, ಇದು ನವೆಂಬರ್ 30, 2024ರ ವೇಳೆಗೆ ಸಂಪೂರ್ಣವಾಗಲಿದೆ.
ಪ್ಯಾಕೇಜ್ 3: ಡಿಪಿ ಜೈನ್ & ಕಂ ಕೈಗೆತ್ತಿಕೊಂಡಿರುವ ಅರಕ್ಕೋಣಂನಿಂದ ಕಾಂಚೀಪುರಂವರೆಗಿನ 26 ಕಿಲೋ ಮೀಟರ್ ಶೇಕಡ 51ರಷ್ಟು ಪೂರ್ಣಗೊಂಡಿದ್ದು, ಇದು ಮಾರ್ಚ್ 31, 2025ರ ವೇಳೆಗೆ ಸಂಪೂರ್ಣವಾಗಿದೆ ಮುಕ್ತಾಯವಾಗಲಿದೆ ಎಂದು ಹೇಳಿದ್ದಾರೆ. ಪ್ಯಾಕೇಜ್ 4: ರಾಮಲಿಂಗಂ ಕನ್‌ಸ್ಟ್ರಕ್ಷನ್ ಜವಾಬ್ದಾರಿ ಹೊತ್ತಿರುವ ಕಾಂಚೀಪುರಂನಿಂದ ಶ್ರೀಪೆರಂಬದೂರ್‌ವರೆಗೆ 32 ಕಿಲೋ ಮೀಟರ್ ಅಂದರೆ ಶೇಕಡ 61ರಷ್ಟು ಪೂರ್ಣಗೊಂಡಿದ್ದು, ಇದು ಫೆಬ್ರವರಿ 28, 2025ರ ವೇಳೆಗೆ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.
ಆರು ಪಥದ ಎನ್‌ಎಚ್4 (ಶ್ರೀಪೆರಂಬದೂರ್-ಮಧುರವಾಯಲ್): ಈ 23 ಕಿಲೋ ಮೀಟರ್ ವಿಸ್ತರಣೆಯು ಶೇಕಡ 99ರಷ್ಟು ಪೂರ್ಣಗೊಂಡಿದ್ದು, ಆಗಸ್ಟ್ 31, 2024ರ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಕೆ ಆಗಲಿದೆ. ಈ ಯೋಜನೆಯು 2024ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಆದರೆ ಇದೀಗ 2025ಕ್ಕೆ ಗಡುವು ನೀಡಲಾಗಿದೆ.












Click it and Unblock the Notifications