ಛತ್ತೀಸ್ ಘಡ: ಬಿಜೆಪಿ ಹೈಕಮಾಂಡ್ ಶಾಕ್, ಹಾಲಿ ಸಂಸದರಿಗೆ ಟಿಕೆಟ್ ಇಲ್ಲ
ರಾಯ್‌ಪುರ, ಮಾರ್ಚ್ 19: ರಾಜ್ಯದಲ್ಲಿ ಕೆಲ ತಿಂಗಳ ಹಿಂದಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಬದಲಾವಣೆ ಕಡೆ ಹೆಜ್ಜೆ ಇಟ್ಟಿದೆ, ಇದಕ್ಕಾಗಿ ಅತ್ಯಂತ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ.
ಛತ್ತೀಸ್ ಘಡ ರಾಜ್ಯದಿಂದ ಲೋಕಸಭೆಗೆ ಆಯ್ಕೆ ಆಗಿದ್ದ ಎಲ್ಲಾ ಹಾಲಿ ಬಿಜೆಪಿ ಸಂಸದರಿಗೆ ಈ ಬಾರಿ ಟಿಕೆಟ್ ಅನ್ನು ನಿರಾಕರಿಸಲಾಗಿದೆ. ಛತ್ತೀಸ್ ಘಡ್‌ನಲ್ಲಿ 11 ಹಾಲಿ ಬಿಜೆಪಿ ಸಂಸದರಿದ್ದರೂ ಅಷ್ಟೂ ಜನರ ಬದಲಿಗೆ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ.
ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇಂದು ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿಯು ಸಭೆ ಸೇರಿದ್ದು ಈ ಸಭೆಯಲ್ಲಿ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ಛತ್ತೀಸ್ ಘಡದ ಎಲ್ಲಾ 11 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆರಿಸಿ ಬಂದಿದ್ದರು. ಅಷ್ಟೆ ಅಲ್ಲದೆ ಅಲ್ಲಿನ ವಿಧಾನಸಭೆಯೂ ಸಹ ಬಿಜೆಪಿಯ ಕೈಯಲ್ಲಿಯೇ ಇತ್ತು. ಆದರೆ ಕೆಲವು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿತು.
ಛತ್ತೀಸ್ ಘಡದ ಜನರು ಬದಲಾವಣೆ ಬಯಸುತ್ತಿದ್ದಾರೆಂದು ಎಚ್ಚೆತ್ತಿರುವ ಬಿಜೆಪಿಯು ಹಾಲಿ ಇರುವ ಎಲ್ಲ ಸಂಸದರನ್ನೂ ಬದಲಾಯಿಸುವ ಕಠಿಣ ನಿರ್ಧಾರವನ್ನು ತಳೆದಿದೆ. ಈ ನಿರ್ಧಾರವು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ತಿಳಿಯಲು ಫಲಿತಾಂಶದ ದಿನ ಮೇ 23ರ ವರೆಗೆ ಕಾಯಬೇಕು.












Click it and Unblock the Notifications