Chardham Yatra: ಇಂದಿನಿಂದ ಭಕ್ತರಿಗೆ ಕೇದಾರನಾಥ ಶಿವನ ದರ್ಶನಕ್ಕೆ ಅವಕಾಶ
ರುದ್ರಪ್ರಯಾಗ ಏಪ್ರಿಲ್ 25: ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದೇವಾಲಯ ಕೇದಾರನಾಥ. ಶಿವನ ವಾಸಸ್ಥಾನವೂ ಆಗಿರುವ, ಉತ್ತರಾಖಂಡ್‌ನ ನಾಲ್ಕು ಧಾಮಗಳಲ್ಲಿ ಒಂದಾದ ಈ ದೇವಾಲಯದ ಬಾಗಿಲನ್ನು ಪ್ರತಿವರ್ಷ ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. ಅಂತೆಯೇ ಏಪ್ರಿಲ್ 22 ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ಬಾಗಿಲು ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆ ಪ್ರಾರಂಭವಾಗಿದೆ.
ಕೇದಾರನಾಥ ದೇವಾಲಯ ಬಾಗಿಲನ್ನು ಏಪ್ರಿಲ್ 25 ರಂದು ಬೆಳಿಗ್ಗೆ 6: 20 ಕ್ಕೆ ತೆರೆಯಲಾಯಿತು. ಕೇದಾರನಾಥ ಯಾತ್ರೆ ದೇಶದ ಹಿಂದೂಗಳ ಪ್ರಮುಖ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಕೇದಾರನಾಥವೂ ಸೇರಿದೆ. ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿಯನ್ನು ನಾಲ್ಕು ಪವಿತ್ರ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ. ಈ ಎಲ್ಲಾ ನಾಲ್ಕು ದೇವಾಲಯಗಳಿಗೆ ತೀರ್ಥಯಾತ್ರೆಯನ್ನು ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ.

ಯಮುನೋತ್ರಿಯನ್ನು ಯಮುನಾ ದೇವಿಗೆ ಮತ್ತು ಗಂಗೋತ್ರಿಯನ್ನು ಗಂಗಾ ಮಾತೆಗೆ ಸಮರ್ಪಿಸಲಾಗಿದೆ. ಕೇದಾರನಾಥವು ಭಗವಾನ್ ಶಿವನಿಗೆ ಸಮರ್ಪಿತವಾದ ದೇಗುಲವಾದರೆ, ಬದರಿನಾಥವು ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದೆ.
ಕಳೆದ ಎರಡು ದಿನಗಳಿಂದ ಹವಾಮಾನ ವೈಪರಿತ್ಯದಿಂದಾಗಿ ಚಾರ್‌ಧಾಮ್ ಪ್ರವೇಶಕ್ಕೆ ಅಡ್ಡಿಯನ್ನುಂಟು ಮಾಡಿದೆ. ಅಧಿಕ ಮಳೆ ಮತ್ತು ಹಿಮಪಾತದಿಂದಾಗಿ ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಭೈರವ ಗದೆರೆ ಬಳಿ ಹಿಮನದಿ ಬರುವ ಸಾಧ್ಯತೆ ಇದೆ. ಇದರಿಂದ ಯಾತ್ರೆಯ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಕೆಲವು ಕುಡಿಯುವ ನೀರಿನ ಮಾರ್ಗಗಳು, ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಜೊತೆಗೆ ಕೇದಾರನಾಥ ಧಾಮದಲ್ಲಿ ನಿರ್ಮಿಸಲಾಗಿದ್ದ ಟೆಂಟ್‌ಗಳಿಗೂ ಹಾನಿಯಾಗಿದೆ.
ಇಂದು ಹವಾಮಾನವು ಉತ್ತಮವಾಗಿದೆ. ಹಿಮದಿಂದ ತುಂಬಿದ ಕೇದಾರನಾಥ ಧಾಮ ಮತ್ತು ಯಾತ್ರಾ ಮಾರ್ಗವನ್ನು ಸರಿಪಡಿಸುವ ಕೆಲಸದಲ್ಲಿ ಕಾರ್ಮಿಕರು ತೊಡಗಿದ್ದಾರೆ. ಅದನ್ನು ಸರಿಪಡಿಸಲು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಡೆಹಿಡಿಯಲಾದ ಕೇದಾರನಾಥ ಯಾತ್ರೆ ಮಾರ್ಗವನ್ನು ಸಂಚಾರ ಸುಗಮಗೊಳಿಸಲಾಗಿದ್ದು, ಸಕಾಲದಲ್ಲಿ ಎಲ್ಲ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಂದ ಸಿದ್ಧತೆ ಮತ್ತು ವ್ಯವಸ್ಥೆಗಳನ್ನು ತ್ವರಿತಗೊಳಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಮಯೂರ್ ಅವರು ತಿಳಿಸಿದ್ದಾರೆ.

ಉತ್ತರಾಖಂಡವು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಕೇದಾರನಾಥ ದೇವಾಲಯವು ಚಳಿಗಾಲದ ತಿಂಗಳುಗಳಲ್ಲಿ ಮುಚ್ಚಲ್ಪಡುತ್ತದೆ ಮತ್ತು ಇದು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ತೆರೆಯುತ್ತದೆ. ಪ್ರಪಂಚದಾದ್ಯಂತದ ಭಕ್ತರು ಆರು ತಿಂಗಳ ಕಾಲ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಚಳಿಗಾಲದ ತಿಂಗಳಲ್ಲಿ ಅಂದರೆ, ನವೆಂಬರ್ ನಿಂದ ಏಪ್ರಿಲ್ ಮಧ್ಯದವರೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ.












Click it and Unblock the Notifications