ಚಂದ್ರಯಾನ: ರಾಜಕೀಯ ಕ್ರೆಡಿಟ್ ವಾರ್‌ಗೆ ಬ್ರೇಕ್ ಹಾಕಿದ ಪ್ರಧಾನಿಯ ವಿಶೇಷ ಭದ್ರತಾ ಪಡೆ
ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಪ್ರಧಾನಿಯವರು ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಅನಧಿಕೃತ ಸುದ್ದಿ ಹೊರಬಿದ್ದಿತ್ತು. ಇದಾದ ನಂತರ ಗ್ರೀಸ್ ದೇಶದ ಅಥೆನ್ಸ್ ನಗರದಿಂದ ನೇರವಾಗಿ ನರೇಂದ್ರ ಮೋದಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ ಎನ್ನುವುದು ಅಧಿಕೃತವಾಗುತ್ತಿದ್ದಂತೆಯೇ ರಾಜಕೀಯ ಕೆಸೆರೆರೆಚಾಟ ಆರಂಭವಾಯಿತು.
ಇದಕ್ಕೆ ಕಾರಣ ಇಲ್ಲದಿಲ್ಲ, ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡುವುದರ ಜೊತೆಗೆ ಪ್ರಧಾನಿಯವರ ರೋಡ್ ಶೋ ನಡೆಯಲಿದೆ ಎನ್ನುವ ಮಾಹಿತಿಯನ್ನು ಮಾಜಿ ಸಚಿವ ಆರ್.ಅಶೋಕ್ ಅವರೇ ಖುದ್ದಾಗಿ ನೀಡಿದ್ದರು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ರೋಡ್ ಶೋ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಲೇ ಸ್ಪಷ್ಟನೆಯನ್ನು ನೀಡಿದ್ದರು.

ರೋಡ್ ಶೋಬಗ್ಗೆ ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ಪಡೆ (Special Protection Group) ಯಾವುದನ್ನೂ ಖಚಿತ ಪಡಿಸಿರಲಿಲ್ಲ. ಯಾವಾಗ, ಮೋದಿ ಭೇಟಿ ರಾಜಕೀಯ ಬಣ್ಣ ಪಡೆಯಲಾರಂಭಿಸಿತೋ, ಕೂಡಲೇ ಬಿಜೆಪಿಯ ವರಿಷ್ಠರು ಶೋಭಾ ಕರಂದ್ಲಾಜೆಯವರಿಂದ ಸ್ಪಷ್ಟನೆಯನ್ನು ನೀಡಿಸಿತ್ತು. ರೋಡ್ ಶೋ ನಡೆಸುವ ಪ್ಲ್ಯಾನೇ ಇಲ್ಲ ಎಂದು ಕರಂದ್ಲಾಜೆ ಹೇಳಿದ್ದರು.
ಸಾಫ್ಟ್ ಲ್ಯಾಂಡಿಂಗ್ ಆದ ದಿನವೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮರುದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿ ಬಂದಿದ್ದರು. ಇದಾದ ನಂತರ, ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಲಾಗುತ್ತದೆ ಎಂದು ಸಿಎಂ ಹೇಳಿದ್ದರು. ಇದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಕ್ರೆಡಿಟ್ ವಾರ್ಡ್ ವಿಚಾರವಾಗಿ ಪರಿವರ್ತನೆಗೊಂಡಿತ್ತು.
ರೋಡ್ ಶೋ ನಡೆಸಲಾಗುತ್ತದೆ ಎನ್ನುವ ಅಶೋಕ್ ಹೇಳಿಕೆ
ಸಚಿವ ಅಶೋಕ್ ಅವರು ರೋಡ್ ಶೋ ನಡೆಸಲಾಗುತ್ತದೆ ಎನ್ನುವ ಹೇಳಿಕೆ ನೀಡಿದ ನಂತರ ಸಿದ್ದರಾಮಯ್ಯನವರು ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದರು. "ಮೋದಿಯವರು ಬೆಂಗಳೂರಿಗೆ ಬರಲಿ, ಸಮಾವೇಶವಾದರೂ ನಡೆಸಲಿ, ರೋಡ್ ಶೋ ಆದರೂ ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ"ಎಂದು ಹೇಳಿದ್ದರು. ವಿಜ್ಞಾನಿಗಳ ಸಾಧನೆ ಎರಡು ಪಕ್ಷಗಳಿಗೆ ರಾಜಕೀಯ ವಿಷಯವಾಗುತ್ತಿದೆ ಎನ್ನುವುದನ್ನು ಅರಿತ ಎಸ್ ಪಿಜಿ ಜಾಣ ನಡೆಯನ್ನು ಇಟ್ಟಿದೆ.

ಚಂದ್ರಯಾನ ಯಶೋಗಾಥೆ
ಚಂದ್ರಯಾನ ಯಶೋಗಾಥೆಯನ್ನು ಜಗದೆಲ್ಲಡೆ ಹಾಡಿ ಕೊಂಡಾಡಲಾಗುತ್ತಿದೆ, ಈ ಯಶಸ್ಸಿನ ಶ್ರೇಯಸ್ಸಿನ ವಿಚಾರದಲ್ಲಿ ರಾಜಕೀಯ ಕ್ರೆಡಿಟ್ ಆರಂಭವಾದ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಮೋದಿ ಕಾರ್ಯಕ್ರಮವನ್ನು ಪ್ರಧಾನಿ ಕಾರ್ಯಾಲಯದ ಅಧಿಕೃತ ಕಾರ್ಯಕ್ರಮ ಎಂದು ಪ್ರಕಟಿಸಲಾಯಿತು. ಬೆಳಗ್ಗೆನೇ ನಡೆಯುತ್ತಿರುವ ಕಾರ್ಯಕ್ರಮ ಆಗಿರುವುದರಿಂದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹಾಜರಿರುವ ಅವಶ್ಯಕತೆಯಿಲ್ಲ ಎಂದು ನಾನೇ ರಾಜ್ಯ ಸರ್ಕಾರಕ್ಕೆ ಹೇಳಿದ್ದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಂ ರಮೇಶ್
ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಈ ವಿಚಾರದಲ್ಲಿ ಟ್ವೀಟ್ ಕೂಡಾ ಮಾಡಿದ್ದರು. "ವಿದೇಶದಿಂದ ಪ್ರಧಾನಿ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ, ಕರ್ನಾಟಕದ ಸಿಎಂ ಮತ್ತು ಡಿಸಿಎಂ, ಇಸ್ರೋ ವಿಜ್ಞಾನಿಗಳನ್ನು ತನಗಿಂತ ಮುಂಚೆ ಹೋಗಿ ಅಭಿನಂದಿಸಿದ್ದನ್ನು ಮೋದಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕಾಗಿ ಶಿಷ್ಟಾಚಾರದ ಭಾಗವಾಗಿ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಲು ಬರುವುದು ಬೇಡ ಎಂದು ಹೇಳಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ, ಸಿಎಂ ಆಗಿದ್ದ ಮೋದಿ ಮಾಡಿದ್ದೇನು"ಎಂದು ಜೈರಾಂ ರಮೇಶ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಮೋದಿಗೆ ನಿರೀಕ್ಷೆಯಂತೆ ಅದ್ದೂರಿ ಸ್ವಾಗತ
ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ನಿರೀಕ್ಷೆಯಂತೆ ಅದ್ದೂರಿ ಸ್ವಾಗತ ಸಿಕ್ಕಿದೆ. ದೇಶದ ಬಾವುಟ, ಇಸ್ರೋ ಸಾಧನೆ ಕುರಿತಾದ ಪ್ಲೇಕಾರ್ಡ್ ಹೊರತಾಗಿ ಪಕ್ಷದ ಯಾವುದೇ ಧ್ವಜ ತರಬಾರದು ಎಂದು ಬಿಜೆಪಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿತ್ತು. ಮೋದಿ ತಮ್ಮ ಮೊದಲ ಭಾಷಣದಲ್ಲಿ ಮತ್ತು ಇಸ್ರೋ ಕಚೇರಿಯಲ್ಲಿನ ಭಾಷಣದಲ್ಲಿ ರಾಜಕೀಯ ಬೆರೆಸದೆ ಸಂಪೂರ್ಣವಾಗಿ ವಿಜ್ಞಾನಿ, ವಿಜ್ಞಾನ, ಇಸ್ರೋ ಹೊರತಾಗಿ ಬೇರೇನೂ ಮಾತನಾಡಲು ಹೋಗಲಿಲ್ಲ. ರಾಜಕೀಯ ಕ್ರೆಡಿಟ್ ವಾರ್ ಅಪವಾದ ಬೇಡ ಎನ್ನುವುದಕ್ಕಾಗಿಯೇ ಎಸ್ಪಿಜಿ, ರೋಡ್ ಶೋಗೆ ಅನುಮತಿ ನೀಡಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications