Chandrayaan-3 launch: ಚಂದ್ರಯಾನ-3 ಉಡಾವಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವರೇ? ಇಸ್ರೋ ಮುಖ್ಯಸ್ಥರು ಹೇಳಿದ್ದೇನು?
ಬೆಂಗಳೂರು, ಜುಲೈ 11: ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಮಿಷಿನ್ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಚಂದ್ರಯಾನ-3 ಮಿಷನ್ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶವೇ ಎದುರು ನೋಡುತ್ತಿದೆ.
ಚಂದ್ರ ಗೃಹದ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಆದ ನಂತರ ಅಲ್ಲಿನ ಭೂವಿಜ್ಞಾನ ಮತ್ತು ಪರಿಸರವನ್ನು ಅನ್ವೇಷಿಸುವ ಗುರಿಯನ್ನು ಚಂದ್ರಯಾನ-3 ಮಿಷನ್ ಹೊಂದಿದೆ. ಇದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಭಾರತದ ಎರಡನೇ ಪ್ರಯತ್ನವಾಗಿದೆ.

ಉಡಾವಣೆಯು ಶುಕ್ರವಾರ ಮಧ್ಯಾಹ್ನ 2:35 ಕ್ಕೆ ನಿಗದಿಯಾಗಿದೆ. ಲ್ಯಾಂಡರ್ ಮತ್ತು ರೋವರ್ ಸೇರಿದಂತೆ ಬಾಹ್ಯಾಕಾಶ ನೌಕೆಯು ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಸುತ್ತುವರಿಯಲ್ಪಟ್ಟಿದೆ. ಇದು ಚಂದ್ರನಲ್ಲಿಗೆ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಚಂದ್ರಯಾನ-3 ಉಡಾವಣೆ ವೇಳಾಪಟ್ಟಿ
ಚಂದ್ರಯಾನ-3 ಉಡಾವಣೆ ಕುರಿತು ಮಾತನಾಡಿರುವ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, 'ಚಂದ್ರಯಾನ-3 ಮಿಷನ್‌ಗೆ ಸಿದ್ಧತೆಗಳು ಸ್ಥಿರವಾಗಿ ನಡೆಯುತ್ತಿವೆ' ಎಂದು ಖಚಿತಪಡಿಸಿದ್ದಾರೆ.
ಚಂದ್ರಯಾನ-2 ಮಿಷನ್ ಕಾರ್ಯಾಚರಣೆಯು ಸಣ್ಣ ಕಾರಣಗಳಿಂದ ಅಂತಿಮ ಹಂತದಲ್ಲಿ ವಿಫಲವಾಗಿದೆ ಎಂದು ಸೋಮನಾಥ್ ತಿಳಿಸಿದ್ದಾರೆ. ಈ ಹಿಂದೆ ಗುರುತಿಸಲಾದ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಇದರಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಬಾಹ್ಯಾಕಾಶ ನೌಕೆಯು ಹೆಚ್ಚಿನ ವೇಗದಲ್ಲಿ ಚಂದ್ರನ ಮೇಲೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಸುಧಾರಿತ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಇದರಲ್ಲಿ ನಡೆಯಲಿದೆ. ಹೆಚ್ಚುವರಿ ಸಂವೇದಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಚಂದ್ರಯಾನ-3 ಉಡಾವಣೆಯಲ್ಲಿ ಪಾಲ್ಗೊಳ್ಳುವರೇ?
ಈ ಮಹತ್ವದ ಉಡಾವಣೆಯನ್ನು ವೀಕ್ಷಿಸಲು ಹಲವಾರು ಗಣ್ಯರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮನಾಥ್ ಅವರು, 'ನಾವು ಎಲ್ಲರಿಗೂ ಆಹ್ವಾನ ನೀಡುತ್ತೇವೆ. ಅದು ಅವರಿಗೆ ಬಿಟ್ಟದ್ದು' ಎಂದು ತಿಳಿಸಿದ್ದಾರೆ.












Click it and Unblock the Notifications