
18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ
ನವದೆಹಲಿ, ಜೂನ್ 07: ''18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರ ಸರ್ಕಾರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ''ರಾಜ್ಯಗಳ ಲಸಿಕೆಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಕ್ರಮ ಕೈಗೊಂಡಿದೆ'' ಎಂದರು.
ಹಾಗೆಯೇ ''ಕೇಂದ್ರ ಸರ್ಕಾರ ನೀಡಿರುವ ಲಸಿಕೆಯ ಶೇ.25ರಷ್ಟು ಖಾಸಗಿ ಆಸ್ಪತ್ರೆಗಳು ಪಡೆಯಬಹುದು, ಹಣವಿರುವವರು ಹಾಗೂ ಲಸಿಕೆ ಉಚಿತವಾಗಿ ಬೇಡ ಎನ್ನುವವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆಯನ್ನು ಪಡೆದುಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.

ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದ ಉಚಿತ ಲಸಿಕೆ ಲಭ್ಯವಾಗಲಿದೆ. 2014ಕ್ಕೂ ಮೊದಲು ದೇಶದಲ್ಲಿ ಶೇ.60ರಷ್ಟು ಲಸಿಕೆಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಲ್ಲಿ ಅದರ ಪ್ರಮಾಣ ಶೇ.80-90ರಷ್ಟಾಗಿದೆ.
ಯಾವುದೇ ಮಾರಣಾಂತಿಕ ಕಾಯಿಲೆಗಳು ದೇಶವನ್ನು ಆಕ್ರಮಿಸಿದಾಗ ಅವುಗಳನ್ನು ಹೊಡೆದೋಡಿಸಲು ದೇಶೀಯ ಲಸಿಕೆಗಳು ಇರಲಿಲ್ಲ, ವಿದೇಶದಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು.
ಪೋಲಿಯೋ, ಹೆಪಟೈಟಸ್, ಸ್ಮಾಲ್ ಪಾಕ್ಸ್ ಯಾವುದೇ ಇರಲಿ ನಮ್ಮ ದೇಶದ್ದೇ ಆದ ಲಸಿಕೆಗಳು ಇರಲಿಲ್ಲ, ಬೇರೆ ದೇಶಗಳಿಂದ ಆಮದು ಮಾಡಲು ಕನಿಷ್ಠ ಎಂದರೂ 10 ವರ್ಷಗಳು ಬೇಕಾಗಿತ್ತು.
ಬೇರೆ ದೇಶಗಳಲ್ಲಿ ಲಸಿಕೆ ಉತ್ಪಾದನೆ ಕೆಲಸ ಪೂರ್ಣಗೊಂಡರೂ ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಆರಂಭಗೊಳ್ಳುತ್ತಿರಲಿಲ್ಲ ಅಷ್ಟು ವ್ಯತ್ಯಾಸವಿತ್ತು. ಆದರೆ ಈಗ ಅದೆಲ್ಲವೂ ಬದಲಾಗಿದೆ.
ನಮ್ಮ ದೇಶದಲ್ಲೂ ಲಸಿಕೆಗಳ ಉತ್ಪಾದನೆ ನಡೆಯುತ್ತಿದೆ. ಕೊರೊನಾಗೆ ನೀಡುತ್ತಿರುವ ಎರಡೂ ಲಸಿಕೆಗಳು ದೇಶದಲ್ಲೇ ಉತ್ಪಾದನೆಗೊಂಡಿರುವುದಾಗಿದೆ ಇದರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.