ಕೊರೊನಾವೈರಸ್ ಲಸಿಕೆ ಕೊರತೆ ನೀಗಿಸಲು ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ!
ನವದೆಹಲಿ, ಜುಲೈ 01: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪ್ರತಿನಿತ್ಯ ಲಕ್ಷ ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಲಸಿಕೆ ವಿತರಣೆ ಕೇಂದ್ರಗಳಲ್ಲಿ 'No Stock' ನಾಮಫಲಕಗಳೇ ರಾರಾಜಿಸುತ್ತಿವೆ.
ದೇಶಾದ್ಯಂತ ಪ್ರಜೆಗಳಿಗೆ ಉಚಿತವಾಗಿ ಕೊವಿಡ್-19 ಲಸಿಕೆ ವಿತರಿಸುವುದಾಗಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಹೊರತಾಗಿಯೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸುವುದಕ್ಕೆ ಅನುಮತಿ ನೀಡಲಾಗಿದೆ.
ಕೊರೊನಾವೈರಸ್ ಲಸಿಕೆ ಉತ್ಪಾದಕ ಕಂಪನಿಗಳಿಂದ ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ಖರೀದಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳು ಒಳಗೊಂಡಿರುವ ಅಂಶಗಳೇನು, ಹೊಸ ಮಾರ್ಗಸೂಚಿ ಹೊರಡಿಸುವುದರ ಹಿಂದಿನ ಕಾರಣವೇನು, ದೇಶದಲ್ಲಿ ಎಷ್ಟು ಕಂಪನಿಗಳ ಯಾವ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ ಹಾಗೂ ಈವರೆಗೂ ದೇಶದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ ಎಂಬುದರ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ ಓದಿ.

ಕೊ-ವಿನ್ ಆಪ್ ಮೂಲಕ ಕೊರೊನಾವೈರಸ್ ಲಸಿಕೆ ಖರೀದಿ
* ಕೊರೊನಾವೈರಸ್ ಉತ್ಪಾದಕ ಕಂಪನಿಗಳಿಂದ ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ನೇರವಾಗಿ ಲಸಿಕೆ ಖರೀದಿಸುವುದಕ್ಕೆ ಅವಕಾಶವಿಲ್ಲ.
* ಕೊ-ವಿನ್ ಅಪ್ಲಿಕೇಶನ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು ಖರೀದಿಸುತ್ತೇವೆ ಎಂಬ ಬಗ್ಗೆ ಮುಂಚಿತವಾಗಿ ಆರ್ಡರ್ ಮಾಡಬೇಕು
* ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ತಾವು ಖರೀದಿಸುವ ಲಸಿಕೆಗೆ ಹಣ ಪಾವತಿ ಮಾಡಬೇಕು
* ಲಸಿಕೆ ಖರೀದಿ ನಂತರದಲ್ಲಿ ಖರೀದಿಸಿರುವ ಲಸಿಕೆ ಹಾಗೂ ನೀಡಿರುವ ಲಸಿಕೆ ಪ್ರಮಾಣದ ಬಗ್ಗೆ ಲೆಕ್ಕ ನೀಡುವುದು
* ಉತ್ಪಾದಕ ಕಂಪನಿಗಳಿಂದ ಶೇ.25ರಷ್ಟು ಲಸಿಕೆಯನ್ನು ಮಾತ್ರ ಖರೀದಿಸುವುದಕ್ಕೆ ಅನುಮತಿ
* ಜುಲೈ 1ರಿಂದಲೇ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಸಂಬಂಧಿಸಿದ ಮಾರ್ಗಸೂಚಿ ಜಾರಿ

ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲು ಕಾರಣ?
ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಮೊದಲಿಗೆ ನೇರವಾಗಿ ಲಸಿಕೆ ಉತ್ಪಾದಕ ಕಂಪನಿಗಳಿಂದಲೇ ಶೇ.25ರಷ್ಟು ಲಸಿಕೆಯನ್ನು ಖರೀದಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಹೀಗೆ ಖರೀದಿಸಿದ ಕೊವಿಡ್-19 ಲಸಿಕೆಯಲ್ಲಿ ಖಾಸಗಿ ಆಸ್ಪತ್ರೆಗಳು ಅರ್ಧದಷ್ಟು ಲಸಿಕೆಯನ್ನು ನೀಡಿ, ಉಳಿದ ಪ್ರಮಾಣದ ಲಸಿಕೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ರೀತಿಯ ಲಸಿಕೆ ಸಂಗ್ರಹಿಸುವುದರಿಂದ ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇನ್ನೊಂದು ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಕೊರತೆ ಬಾಧಿಸುತ್ತಿರುವ ಹಿನ್ನೆಲೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

150 ರೂಪಾಯಿ ಸೇವಾ ಶುಲ್ಕ ಪಡೆಯಲು ಅನುಮತಿ
ಖಾಸಗಿ ಆಸ್ಪತ್ರೆಗಳು ಕೊ-ವಿನ್ ಆಪ್ಲಿಕೇಶನ್ ಮೂಲಕ ಖರೀದಿಸಿದ ಕೊರೊನಾವೈರಸ್ ಲಸಿಕೆ ಪ್ರಮಾಣ ಎಷ್ಟಿದೆ. ಹೀಗೆ ಖರೀದಿಸಿರುವ ಲಸಿಕೆಯಲ್ಲಿ ಎಷ್ಟು ಲಸಿಕೆಯನ್ನು ವಿತರಿಸಲಾಗಿದೆ. ಬಾಕಿ ಎಷ್ಟು ಪ್ರಮಾಣದ ಲಸಿಕೆ ಉಳಿದಿದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅಲ್ಲದೇ ಕಂಪನಿಯು ನಿಗದಿಪಡಿಸಿರುವ ಬೆಲೆಯ ಮೇಲೆ 150 ರೂಪಾಯಿ ಮಾತ್ರ ಸೇವಾ ಶುಲ್ಕವನ್ನು ವಿಧಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಭಾರತದಲ್ಲಿ ನಾಲ್ಕು ಕಂಪನಿಗಳ ಲಸಿಕೆಗೆ ಅನುಮೋದನೆ
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್-ವಿ ಹಾಗೂ ಇತ್ತೀಚಿಗೆ ಅನುಮೋದನೆ ಪಡೆದಿರುವ ಮಾಡೆರ್ನಾ ಲಸಿಕೆಯನ್ನು ಭಾರತದಲ್ಲಿ ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

33.57 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು.
ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ. ದೇಶದಲ್ಲಿ ಈವರೆಗೂ 33,57,16,019 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ.












Click it and Unblock the Notifications