Petrol-Diesel Price: ಪೆಟ್ರೋಲ್, ಡೀಸೆಲ್ ಮೇಲೆ ₹2 ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ
ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ತಲಾ 2 ರೂಪಾಯಿ ಏರಿಕೆ ಮಾಡಿದೆ. ಈ ಸಂಬಂಧ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಧಿಸೂಚನೆ ಹೊರಡಿಸಿದೆ. ಈ ಪರಿಷ್ಕೃತ ದರವು ಏಪ್ರಿಲ್ 8ರ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಒಟ್ಟಾರೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂಪಾಯಿಗೆ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ಹೊಸ ಆದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಬೆಲೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಉಲ್ಲೇಖಿಸಿಲ್ಲ. ಆದರೆ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ ಎಂದು ತೈಲ ಮಾರುಕಟ್ಟೆಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತಕ್ಕೆ ಅನುಗುಣವಾಗಿ ಈ ಹೆಚ್ಚುವರಿ ಅಬಕಾರಿ ಸುಂಕವನ್ನು ಸರಿಹೊಂದಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ತೈಲ ಮಾರುಕಟ್ಟೆ ಕಂಪನಿಗಳು (OMC) ಈ ವೆಚ್ಚವನ್ನು ಭರಿಸುವ ನಿರೀಕ್ಷೆಯಿರುವುದರಿಂದ ಗ್ರಾಹಕರಿಗೆ ಈ ತೆರಿಗೆ ಏರಿಕೆಯ ಪರಿಣಾಮವನ್ನು ಎದುರಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.

ಈ ಅಬಕಾರಿ ಸುಂಕ ದರಗಳಲ್ಲಿ ಹೆಚ್ಚಳವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ ಎಂದು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಟ್ವೀಟ್ ಮಾಡಿದೆ. ಹಾಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಮಾತ್ರ ಹೆಚ್ಚಾಗಿದ್ದು, ದರಗಳು ಎಂದಿನಂತೆಯೇ ಇರಲಿದೆ. ಇದರಿಂದ ಗ್ರಾಹಕರ ಆತಂಕ ದೂರವಾಗಿದೆ.

ರಾಜ್ಯದಲ್ಲಿ ಡೀಸೆಲ್ 2 ರೂಪಾಯಿ ಏರಿಕೆ
ಕರ್ನಾಟಕ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಡೀಸೆಲ್ ದರ ಏರಿಸಿ ಶಾಕ್ ನೀಡಿತ್ತು. ಪ್ರತಿ ಲೀಟರ್ ಡೀಸೆಲ್ ಮೇಲೆ 2 ರೂಪಾಯಿ ದರ ಏರಿಕೆ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73ರಷ್ಟು ಹೆಚ್ಚಳ ಮಾಡಿ ಜಾರಿಗೆ ಬರುವಂತೆ ಆದೇಶ ನೀಡಿದ್ದು ರಾಜ್ಯದಲ್ಲಿ ಡೀಸೆಲ್ ಮತ್ತಷ್ಟು ದುಬಾರಿಯಾಗಿದೆ.
ಶೇ 2.73 ತೆರಿಗೆ ಹೆಚ್ಚಳವಾದ ಬಳಿಕ ಪ್ರತಿ ಲೀಟರ್ ಡೀಸೆಲ್ ಬೆಲೆ ಇದೀಗ 2 ರೂಪಾಯಿ ಹೆಚ್ಚಾಗಿದೆ. ಈ ಮೊದಲು ಶೇ. 18.44ರಷ್ಟಿದ್ದ ತೆರಿಗೆಯನ್ನು ಇದೀಗ ಮತ್ತೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ ಡೀಸೆಲ್ ಬೆಲೆ 88.99 ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ ಪ್ರತಿ ಲೀಟರ್ ಮೇಲೆ ಎರಡು ರೂಪಾಯಿ ಏರಿಕೆ ಕಂಡಿದೆ.
ಇದರ ವಿರುದ್ಧ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹೊತ್ತಿನಲ್ಲೇ ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿರುವುದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಬಕಾರಿ ಸುಂಕ ಏರಿಕೆಯಿಂದ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದರಗಳು ಯತಾಸ್ಥಿತಿಯಲ್ಲೇ ಇರಲಿವೆ ಎಂದು ವರದಿಯಾಗಿದೆ.
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿವೆ. ಆದರೆ ಬಿಜೆಪಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಮೂಲಕ ಜನರಿಗೆ ಬಹುಮಾನ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ಕರ್ನಾಟಕ ಬಿಜೆಪಿ ಈಗ ದೆಹಲಿಯಲ್ಲಿ ತಮ್ಮ ಯಜಮಾನರ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುತ್ತದೆಯೇ? ಅಥವಾ ಆಕ್ರೋಶವು ರಾಜ್ಯ ಸರ್ಕಾರವನ್ನು ದೂಷಿಸುವುದಕ್ಕೆ ಮಾತ್ರ ಮೀಸಲಾಗಿದೆಯೇ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವರ ಸ್ಪಷ್ಟನೆ ಏನು?
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ದರಗಳು 2 ರೂಪಾಯಿಗಳಷ್ಟು ಹೆಚ್ಚಾಗುತ್ತಿವೆ ಎಂದು ಹಣಕಾಸು ಸಚಿವಾಲಯದಿಂದ ಅಧಿಸೂಚನೆ ಬಂದಿದೆ. ಈ ಹೆಚ್ಚುವರಿ ತೆರಿಗೆಯು ಗ್ರಾಹಕರ ಮೇಲೆ ಹೊರೆ ಬೀಳುವುದಿಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸುತ್ತೇನೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 60 ಡಾಲರ್‌ಗೆ ಇಳಿದಿದೆ. ಆದರೆ ನಮ್ಮ ತೈಲ ಮಾರುಕಟ್ಟೆ ಕಂಪನಿಗಳು 45 ದಿನಗಳ ಅವಧಿಯಲ್ಲಿ ದಾಸ್ತಾನುಗಳನ್ನು ಹೊಂದಿವೆ. ಇದನ್ನು ಜನರು ದಯವಿಟ್ಟು ನೆನಪಿನಲ್ಲಿಡಿ. ಜನವರಿಗೆ ಹಿಂತಿರುಗಿದರೆ, ಆಗ ಕಚ್ಚಾ ತೈಲದ ಬೆಲೆ 83 ಡಾಲರ್ ಆಗಿತ್ತು. ಅದು ನಂತರ 75 ಡಾಲರ್‌ಗಳಿಗೆ ಇಳಿಯಿತು. ಆದ್ದರಿಂದ ಅವರು ಸಾಗಿಸುತ್ತಿರುವ ಕಚ್ಚಾ ತೈಲ ದಾಸ್ತಾನು ಪ್ರತಿ ಬ್ಯಾರೆಲ್‌ಗೆ ಸರಾಸರಿ 75 ಡಾಲರ್ ಆಗಿದೆ. ಜಾಗತಿಕ ಬೆಲೆಗೆ ಅನುಗುಣವಾಗಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಿಸುತ್ತವೆ. ಅವರು ಮಾರುಕಟ್ಟೆ ಚಿಲ್ಲರೆ ಬೆಲೆಯನ್ನು ಅದಕ್ಕೆ ಅನುಗುಣವಾಗಿ ಸರಿಹೊಂದಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ದರ ಕೂಡ ಹೆಚ್ಚಳ
ಎಲ್‌ಪಿಜಿ ಸಿಲಿಂಡರ್‌ನ ಪ್ರತಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಾಗಲಿದೆ. ಪಿಎಂಯುವೈ ಫಲಾನುಭವಿಗಳಿಗೆ 500ರಿಂದ 550 ರೂಪಾಯಿಗೆ ಸಿಗಲಿದೆ. ಇತರರಿಗೆ ಇದು 803 ರೂ.ನಿಂದ 853 ರೂ.ಗೆ ಏರಿಕೆಯಾಗಲಿದೆ ಎಂದೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ. ನಾವು ಪ್ರತಿ 2-3 ವಾರಗಳಿಗೊಮ್ಮೆ ಇದನ್ನು ಪರಿಶೀಲಿಸುತ್ತೇವೆ. ಆದ್ದರಿಂದ ನೀವು ಕಂಡ ಅಬಕಾರಿ ಸುಂಕವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದಿದ್ದಾರೆ.
ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಳವು ಉಜ್ವಲ ಫಲಾನುಭವಿಗೆ ಮತ್ತು ಒಟ್ಟಾರೆಯಾಗಿ ಉಜ್ವಲ ಫಲಾನುಭವಿಯಲ್ಲದವರಿಗೂ ಅನ್ವಯಿಸುತ್ತದೆ. ಇದನ್ನು ಪ್ರತಿ 15-30 ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಈ ಪ್ರವೃತ್ತಿ ಮುಂದುವರಿದರೆ, ಬೆಲೆಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ ಎಂದೂ ಸಚಿವ ಹರ್ದೀಪ್ ಸಿಂಗ್ ಪುರಿ ಸುಳಿವು ನೀಡಿದ್ದಾರೆ.












Click it and Unblock the Notifications