8th Pay Commission: 8ನೇ ವೇತನ ಆಯೋಗ; ಸರ್ಕಾರಿ ನೌಕರರ ಒತ್ತಾಯವೇನು?
8ನೇ ವೇತನ ಆಯೋಗ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. 8ನೇ ವೇತನ ಆಯೋಗ ಘೋಷಣೆ ವಿಳಂಬವಾಗುತ್ತಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ 8ನೇ ಕೇಂದ್ರ ವೇತನ ಆಯೋಗವನ್ನು ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದೆ.
ಈ ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಸುಮಾರು 7 ಲಕ್ಷ ಕೇಂದ್ರ ಸರ್ಕಾರಿ ನೌಕರರನ್ನು ಒಳಗೊಂಡಿದೆ. ಇದು 130 ಸಂಘಗಳ ಒಕ್ಕೂಟವಾಗಿದೆ. ಅಂಚೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಲೆಕ್ಕ ಪರಿಶೋಧನಾ ಇಲಾಖೆ, ಸಿಪಿಡಬ್ಲ್ಯೂಡಿ, ಸಿಜಿಎಚ್‌ಎಸ್, ಸರ್ವೆ ಇಲಾಖೆ, ಜನಗಣತಿ, ಜಿಎಸ್‌ಐ, ಸೇರಿದಂತೆ ವಿವಿಧ ಇಲಾಖೆಗಳ ನೌಕರರ ಇದರಲ್ಲಿ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ನೌಕರರ ಒಕ್ಕೂಟವು, ಜನವರಿ 1, 2016ರಲ್ಲಿ ಕೊನೆಯ ಬಾರಿಗೆ ವೇತನ ಪರಿಷ್ಕರಣೆ ಮಾಡಲಾಗಿದೆ ಆದರೆ ಜುಲೈ 1, 2024ರ ವೇಳೆಗೆ ಡಿಎ ಅರ್ಹತೆ ಈಗ 53 ಪ್ರತಿಶತ ಮೀರಿದೆ ಎಂದು ತಿಳಿಸಿದೆ. ಈ 9 ವರ್ಷಗಳ ಅವಧಿಯಲ್ಲಿ ವೇತನದ ನಿಜವಾದ ಮೌಲ್ಯ ಕಡಿಮೆಯಾಗಿದೆ. ಕೋವಿಡ್ 19 ಸಾಂಕ್ರಾಮಿಕದ ಬಳಿಕ ಹಣದ ಮೌಲ್ಯ ಕಡಿಮೆಯಾಗಿದ್ದು, ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಹೇಳಿದೆ.
5 ವರ್ಷಕ್ಕೊಮ್ಮೆ ವೇತನ ಪರಿಷ್ಕರಿಸಲು ಆಗ್ರಹ
ಕೇಂದ್ರ ಸರ್ಕಾರಿ ನೌಕರರ ವೇತನ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಕೆಲಸಕ್ಕೆ ಸೇರುವಂತೆ ಉತ್ತೇಜಿಸುವಷ್ಟು ಚನ್ನಾಗಿರಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ವೇತನವನ್ನು ಪರಿಷ್ಕರಣೆ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಉತ್ತಮ ನಾಯಕತ್ವ ಮತ್ತು ಉತ್ತಮ ಆಡಳಿತ ನೀಡುವಲ್ಲಿ ಪ್ರತಿಭಾವಂತ ಉದ್ಯೋಗಿಗಳು ಸಹಕಾರಿಯಾಗುತ್ತಾರೆ ಎಂದು ಒಕ್ಕೂಟ ಮನವಿ ಮಾಡಿದೆ.
ಭಾರತ ಸರ್ಕಾರ ಇಡೀ ವಿಶ್ವದಲ್ಲೇ ಮಾದರಿ ಉದ್ಯೋಗದಾತ ಎನಿಸಿಕೊಂಡಿದೆ. ಕೇಂದ್ರ ಸರ್ಕಾರ ರೂಪಿಸುವ ಕಾರ್ಯಕ್ರಮ ಮತ್ತು ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಮಾಡಲು ಕೇಂದ್ರ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದ್ದು, ಇಂತಹ ನೌಕರರಿಗೆ ಉತ್ತಮ ಜೀವನ ಕಲ್ಪಿಸಲು ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಜನವರಿ 1, 2016ರಿಂದ ಬಾಕಿ ಉಳಿದಿದ್ದು, 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಮತ್ತು ವೇತನ ಪರಿಷ್ಕರಣೆ ಮಾಡಲಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ರಚಿಸಲಾಗಿದೆ. ವೇತನ ಆಯೋಗಗಳು ತಮ್ಮ ವರದಿ ಸಲ್ಲಿಸಲು 2 ವರ್ಷ ಸಮಯ ತೆಗೆದುಕೊಳ್ಳುತ್ತಿವೆ, ಅದನ್ನು ಪರಿಗಣಿಸಲು ಮತ್ತು ಜಾರಿ ಮಾಡಲು ಸರ್ಕಾರ 6 ತಿಂಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎಂದು ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.
ನೌಕರರಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ
ಸರ್ಕಾರಿ ನೌಕರರ ಒಕ್ಕೂಟದ ಒತ್ತಾಯದ ನಡುವೆಯೂ ಹೊಸ ವೇತನ ಆಯೋಗ ರಚಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಯಲಯ ರಾಜ್ಯಸಭೆಗೆ ಸ್ಪಷ್ಟಪಡಿಸಿದ್ದು ಕೇಂದ್ರ ಸರ್ಕಾರಿ ನೌಕರರಿಗೆ ಆಘಾತ ನೀಡಿದೆ.












Click it and Unblock the Notifications