Modi Government: ಮೋದಿ ಸರ್ಕಾರ ಜಾಹೀರಾತಿಗೆ ಖರ್ಚು ಮಾಡಿದ್ದೆಷ್ಟು?
ನವದೆಹಲಿ: ಇದು ಜಾಹೀರಾತುಗಳ ಜಮಾನ, ಅದರಲ್ಲೂ ಸರ್ಕಾರಗಳು ತಮ್ಮ ಯೋಜನೆ ಕುರಿತಾಗಿ ಜನರಿಗೆ ಮಾಹಿತಿ ನೀಡಲು ಸಾವಿರಾರು ಕೋಟಿ ಸುರಿಯುತ್ತವೆ. ಹೀಗೆ ನರೇಂದ್ರ ಮೋದಿ ಅವರ ಸರ್ಕಾರ ಕೂಡ ಭಾರಿ ಹಣವನ್ನ ಖರ್ಚು ಮಾಡಿದೆ. ಹಾಗಾದರೆ ನರೇಂದ್ರ ಮೋದಿ ಸರ್ಕಾರ ಜಾಹೀರಾತಿಗಾಗಿ ಖರ್ಚು ಮಾಡಿರುವ ಹಣವೆಷ್ಟು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
2018ರಿಂದ ಇಲ್ಲಿಯ ತನಕ ಕೇಂದ್ರ ಸರ್ಕಾರ ಬರೋಬ್ಬರಿ 3,064 ಕೋಟಿ ರೂ. ಹಣವನ್ನು ಜಾಹೀರಾತು ಹಾಗೂ ಪ್ರಚಾರಕ್ಕಾಗಿ ಖರ್ಚು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಮುದ್ರಣ ಮಾಧ್ಯಮಗಳು ಅತಿಹೆಚ್ಚು ಜಾಹೀರಾತು ಪಡೆದಿದ್ದು ಹಾಗೂ ನಂತರದ ಸ್ಥಾನದಲ್ಲಿ ಟಿವಿ ಮಾಧ್ಯಮಗಳು ಸ್ಥಾನ ಪಡೆದಿವೆ. ಹಾಗಾದರೆ ಈ ಮಾಹಿತಿಯನ್ನ ನೀಡಿದ್ದು ಯಾರು? ಯಾವ ಯಾವ ಮಾಧ್ಯಮಗಳಿಗೆ ಎಷ್ಟು ಜಾಹೀರಾತು ನೀಡಲಾಗಿದೆ? ಅದರ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಯಾವ ಯಾವ ಮಾಧ್ಯಮಕ್ಕೆ ಎಷ್ಟು?
ಹೌದು, ಕಳೆದ ವಾರ ರಾಜ್ಯಸಭೆಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ ಸರ್ಕಾರ 2018-19 ಮತ್ತು 2023-24ರ ನಡುವೆ ಒಟ್ಟಾರೆ ಮುದ್ರಣ ಮಾಧ್ಯಮಗಳಿಗೆ 1,338 ಕೋಟಿ ರೂಪಾಯಿ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ 1,273 ಕೋಟಿ ರೂಪಾಯಿ ಹಾಗೂ ಹೊರಾಂಗಣ ಪ್ರಚಾರಕ್ಕಾಗಿ 452 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳು ಸ್ಥಾನ ಪಡೆದಿವೆ. ಇನ್ನೂ ಈ ಜಾಹೀರಾತು ನೀಡುವ ಪ್ರಮಾಣ ಇತ್ತೀಚೆಗೆ ಒಂದಷ್ಟು ಕಡಿಮೆ ಆಗಿದೆ. ಒಟ್ಟಾರೆ ವೆಚ್ಚವು 2018-19ರಲ್ಲಿ 1,179 ಕೋಟಿ ರೂಪಾಯಿಯಿಂದ 2022-23ರಲ್ಲಿ 408 ಕೋಟಿ ರೂ.ಗೆ ಇಳಿಕೆ ಕಂಡಿದೆ.
ಮುದ್ರಣ ಮಾಧ್ಯಮಕ್ಕೆ ಹೆಚ್ಚಿನ ಪಾಲು!
ಹಾಗೇ 2019-20ರಲ್ಲಿ ಕೇಂದ್ರ ಸರ್ಕಾರದ ಜಾಹೀರಾತು ವೆಚ್ಚ 708.18 ಕೋಟಿ ರೂಪಾಯಿಗೆ ಕುಸಿದಿತ್ತು. ಇದು 2020-21ರಲ್ಲಿ 409 ಕೋಟಿಗೆ ಮತ್ತು 2021-22ರಲ್ಲಿ ರೂ 315.98 ಕೋಟಿಗೆ ಕುಸಿದಿತ್ತು. ಆದರೆ ಇದೀಗ ಅಂದರೆ 2022-23ರಲ್ಲಿ ಮತ್ತೆ ಏರಿಕೆ ಕಂಡಿದ್ದು, ಈ ವರ್ಷದ ಏಪ್ರಿಲ್ ಮತ್ತು ಜುಲೈ 13 ನಡುವೆ ಕೇಂದ್ರ ಸರ್ಕಾರವು ಜಾಹೀರಾತಿಗಾಗಿ 43.16 ಕೋಟಿ ರೂ. ಖರ್ಚು ಮಾಡಿದೆ ಅಂತಿದೆ ಅಂಕಿ-ಅಂಶ. ಈ ಪ್ರಕಾರ ಮುದ್ರಣ ಮಾಧ್ಯಮದಲ್ಲಿ 2018-19 ಮತ್ತು 2019-20ರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಹೆಚ್ಚಿನ ಪಾಲನ್ನು ಹೊಂದಿದೆ. ಹೀಗೆ ಕೇಂದ್ರ ಸರ್ಕಾರ ಜಾಹೀರಾತು ಹಾಗೂ ಪ್ರಚಾರಕ್ಕೆ ಸಾಕಷ್ಟು ಖರ್ಚು ಮಾಡಿದೆ.
ಒಟ್ನಲ್ಲಿ ಕಳೆದ ಲೋಕಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ಪ್ರಚಾರ ವೆಚ್ಚ ಇಳಿಕೆ ಕಾಣುತ್ತಾ ಬಂದಿದೆ. ಇದೀಗ ಇನ್ನೇನು ಮತ್ತೆ ಲೋಕಸಭೆ ಎಲೆಕ್ಷನ್ ಹತ್ತಿರವಿದ್ದು, ಜಾಹೀರಾತು ವೆಚ್ಚ ಏರಿಕೆ ಆಗಬಹುದಾ? ಅಥವಾ ಇಳಿಕೆ ಕಾಣುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications