ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ, ಸೇನೆ ಪ್ರತಿದಾಳಿ
ಜಮ್ಮು ಕಾಶ್ಮೀರ, ಜನವರಿ 20: ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ಇಬ್ಬಗೆ ನೀತಿ ಮುಂದುವರೆಸಿದೆ, ಇಂದು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್, ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದೆ.
ಮೇಂದರ್ ಸೆಕ್ಟರ್‌ನ ಪೂಂಚ್ ಬಳಿ ಶುಕ್ರವಾರ ತಡರಾತ್ರಿ ಪಾಕಿಸ್ತಾನವು ಪ್ರಚೋದಿತ ದಾಳಿ ನಡೆಸಿದೆ. ಬಿಎಸ್‌ಎಫ್‌ನ 35 ಚೆಕ್ ಪೋಸ್ಟ್ ಅನ್ನು ಗುರಿಯಾಗಿಸಿಕೊಂಡು ಪಾಕ್ ಗುಂಡಿನ ಸುರಿಮಳೆಗರೆದಿದ್ದು, ಒಬ್ಬ ನಾಗರೀಕ ಅಸುನೀಗಿದ್ದು, ಭಾರತೀಯ ಸೈನಿಕ ಲಾನ್ಸ್ ನಾಯಕ್ ಶಾಮ್ ಅಬ್ರಹಾಮ್ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಬಿಎಸ್‌ಎಫ್ ಪಡೆ ಮರುದಾಳಿ ನಡೆಸಿ 8 ಮಂದಿ ಪಾಕ್ ರೇಂಜರ್ಸ್‌ಗಳನ್ನು ಪರಲೋಕಕ್ಕೆ ರವಾನಿಸಿದೆ.

ಸತತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುವ ಪಾಕಿಸ್ತಾನ ಕೇವಲ ಈ ವರ್ಷದ 20 ದಿನದಲ್ಲಿ 100 ಕ್ಕೂ ಹೆಚ್ಚು ಬಾರಿ ಗಡಿ ನಿಯಂತ್ರಣ ರೇಖೆ ಮತ್ತು ಇತರ ಗಡಿಗಳಲ್ಲಿ ಕದನ ವಿರಾಮ ಉಲ್ಲಂಘಿಸಿದೆ.
2003ರ ಗಡಿಯಲ್ಲಿ ಶಾಂತಿಸ್ಥಾಪನೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಪಾಕಿಸ್ತಾನವು ಸತತವಾಗಿ ಮುರಿಯುತ್ತಲೇ ಬಂದಿದ್ದು, ಪಾಕ್ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.












Click it and Unblock the Notifications