ಪತ್ರಕರ್ತನ ಹತ್ಯೆ ಪ್ರಕರಣ: ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ
ಸಿರ್ಸಾ, ಜನವರಿ 17: ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್‌ಗೆ ಪಂಚಕುಳ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಾಮ್ ರಹೀಂ ಅಲ್ಲದೆ, ಇತರೆ ಮೂವರು ದೋಷಿಗಳಾದ ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷ್ಣನ್ ಲಾಲ್ ಅವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ತಲಾ 50 ಸಾವಿರ ರೂ. ದಂಡ ವಿಧಿಸಲಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ಪ್ರಕಟಿಸಿತು.
ಪತ್ರಕರ್ತ ರಾಮಚಂದ್ರ ಛತ್ರಪತಿ ಎಂಬುವವರನ್ನು ಪಿತೂರಿ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್‌ನನ್ನು ದೋಷಿ ಎಂದು ಹರಿಯಾಣದ ಪಂಚಕುಳ ನ್ಯಾಯಾಲಯ ಜ. 11ರಂದು ಪರಿಗಣಿಸಿತ್ತು. ಆತನ ಶಿಕ್ಷೆಯ ಪ್ರಮಾಣವನ್ನು ಜ. 17ರಂದು ಪ್ರಕಟಿಸುವುದಾಗಿ ತಿಳಿಸಿತ್ತು.
51 ವರ್ಷ ವಯಸ್ಸಿನ ರಾಮ್ ರಹೀಮ್ ಸದ್ಯಕ್ಕೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ ಎಂಬ ಆರೋಪ ಪ್ರಕರಣ (castration case) ದಲ್ಲಿ ಇತ್ತೀಚೆಗೆ ರಾಮ್ ರಹೀಮ್ ಗೆ ಜಾಮೀನು ಸಿಕ್ಕಿತ್ತು.
ತೀರ್ಪಿನ ನಿಮಿತ್ತ ಇಂದು ಹರಿಯಾಣದ ಸಿರ್ಸಾ ಮತ್ತು ಪಂಚಕುಳದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.












Click it and Unblock the Notifications