ರಾಬರ್ಟ್ ವಾದ್ರಾ ಭೂ ಹಗರಣ ಸಿಬಿಐ ತನಿಖೆಗೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮೇಲೆ ಆರೋಪ ಕೇಳಿಬಂದಿರುವ ಬಿಕಾನೇರ್ ಭೂ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳಲಿದೆ ಎಂದು ವರದಿಯಾಗಿದೆ. ಎಎನ್ ಐ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ.
ಈ ಹಗರಣದಲ್ಲಿ ಪಾಲ್ಗೊಂಡ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ಕೈಗೊಳ್ಳಲಿದೆ. ಆಗಸ್ಟ್ ಇಪ್ಪತ್ತೆರಡರಂದು ರಾಜಸ್ತಾನ ಸರಕಾರ ಈ ಬಗ್ಗೆ ಸಿಬಿಐಗೆ ಪತ್ರ ಬರೆದಿದೆ. ಈ ಕ್ರಮವನ್ನು ರಾಬರ್ಟ್ ವಾದ್ರಾ, ನನಗೆ ಕೆಟ್ಟ ಹೆಸರು ತರುವ ಪ್ರಯತ್ನ ಎಂದಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿರುವ ವಾದ್ರಾ, ಕೆಟ್ಟ ಹೆಸರು ತರುವ ಮತ್ತೊಂದು ವಿಚಾರಣೆ ಬಯಲಾಗಿದೆ. ಮೂರು ವರ್ಷದ ಹಿಂದೆ ರಾಜಸ್ತಾನದ ಪೊಲೀಸರು ಎಫ್ ಐಆರ್ ದಾಖಲಿಸಿದರು. ಆ ನಂತರ ಚಾರ್ಜ್ ಶೀಟ್ ಹಾಕಿ, ದಾಖಲೆಗಳು ನೀಡುವಂತೆ ಕೇಳಿದರು. ಕಂಪೆನಿ ಅಧಿಕಾರಿಗಳ ವಿಚಾರಣೆ ನಡೆಸಿದರು.
ಆದರೆ, ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ನನ್ನ ವ್ಯವಹಾರ ಇರುವ ಯಾವುದೇ ಕಂಪೆನಿಯ ಹೆಸರು ಎಫ್ ಐಆರ್ ಅಥವಾ ಚಾರ್ಜ್ ಶೀಟ್ ನಲ್ಲಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಮೂರು ವರ್ಷದ ಹಿಂದೆ ಬಿಕಾನೇರ್ ನ ಹದಿನೆಂಟು ಮ್ಯುಟೇಶನ್ ಗಳನ್ನು ರಾಜಸ್ತಾನ ಸರಕಾರ ಕಾನೂನು ಬಾಹಿರ ಎಂದು ರದ್ದು ಮಾಡಿತ್ತು. ವಾದ್ರಾಗೆ ಸೇರಿದ ಕಂಪೆನಿ ಕೂಡ ಅಲ್ಲಿ ಭೂಮಿ ಖರೀದಿಸಿದ್ದಾಗಿ ಆರೋಪಿಸಲಾಗಿತ್ತು. ಹಳ್ಳಿಗರೊಬ್ಬರ ಹೆಸರನ್ನು ತಪ್ಪಾಗಿ ತೋರಿಸಿ ಭೂಮಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂಬುದು ಆರೋಪವಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
ಸರಕಾರವು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಶೋಷಣೆ ಮಾಡಲು, ಹಿಂಸಿಸಲು ಯತ್ನಿಸುತ್ತಿದೆ ಎಂದು ವಾದ್ರಾ ಆರೋಪ ಮಾಡಿದ್ದಾರೆ.












Click it and Unblock the Notifications