CBFC Board: ‘ಕಾಶ್ಮೀರ್ ಫೈಲ್ಸ್’ ನಟಿಗೆ ಕೇಂದ್ರದಿಂದ ಮಣೆ; ಪಲ್ಲವಿ ಜೋಶಿ ಸೇರಿ 18 ಮಂದಿಗೆ ಹೊಸ ಹೊಣೆ

ನವದೆಹಲಿ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯನ್ನು ಮರುರಚಿಸಲಾಗಿದ್ದು, ಬಾಲಿವುಡ್‌ ನಟಿಯರಾದ ಪ್ರೀತಿ ಜಿಂಟಾ, ನಟರಾದ ಸುನೀಲ್ ಶೆಟ್ಟಿ ಹಾಗೂ ಪಂಕಜ್ ತ್ರಿಪಾಠಿ ಸೇರಿದಂತೆ ಒಟ್ಟು 18 ಮಂದಿಯನ್ನು ಹೊಸ ಮಂಡಳಿಗೆ ನೇಮಕ ಮಾಡಲಾಗಿದೆ. ನೂತನ ಮಂಡಳಿಯ ಸದಸ್ಯರ ಅವಧಿ ಮೂರು ವರ್ಷಗಳಾಗಿದ್ದು, ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಹೊಸ 18 ಸದಸ್ಯರ ಮಂಡಳಿಯಲ್ಲಿ ಚಿತ್ರರಂಗದ ಹಲವು ಪ್ರಮುಖ ಹೆಸರುಗಳಿಗೆ ಸ್ಥಾನ ನೀಡಲಾಗಿದೆ. ನಟರಾದ ಮನೋಜ್ ಜೋಶಿ, ಪ್ರೊಸೆನ್‌ಜಿತ್ ಚಟರ್ಜಿ, 'ಕಾಶ್ಮೀರ್ ಫೈಲ್ಸ್' ಖ್ಯಾತಿಯ ಪಲ್ಲವಿ ಜೋಶಿ ಹಾಗೂ ರೂಪಾಲಿ ಗಂಗೂಲಿ, ನಿರ್ದೇಶಕ ಪ್ರಿಯದರ್ಶನ್ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ಕೂಡ ಮಂಡಳಿಯಲ್ಲಿದ್ದಾರೆ. ಇವರೊಂದಿಗೆ ವಿನೋದ್ ಅನುಪಮ್, ಅಭಿಷೇಕ್ ಜೈನ್, ಹಂಸರಾಜ್ ಹನ್ಸ್, ಸುಪ್ರಿಯಾ ಯಾರ್ಲಗಡ್ಡ, ಯತೀಂದ್ರ ಮಿಶ್ರಾ, ನೀಲ ಮಾಧಬ್ ಪಾಂಡಾ, ನಿಶಿಗಂಧಾ ವಾಡ್, ವಾಮನ್ ಕೇಂದ್ರೆ ಹಾಗೂ ರಮೇಶ್ ಪಟಂಗೆ ಅವರನ್ನು ಸಹ ನೇಮಕ ಮಾಡಲಾಗಿದೆ.

CBFC Board Appointed to 18-Member Central Board of Film Certification Board Centre Announces New Panel

ಹೊಸ ಮಂಡಳಿ ರಚನೆ

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 3(1) ಹಾಗೂ 2024ರ ಸಿನಿಮಾಟೋಗ್ರಾಫ್ ಪ್ರಮಾಣೀಕರಣ ನಿಯಮಗಳ ರೂಲ್ 3ರ ಅಡಿಯಲ್ಲಿ ಈ ಹೊಸ ಮಂಡಳಿಯನ್ನು ರಚಿಸಿದೆ. ಹಿಂದಿನ ಮಂಡಳಿಯ ಹಲವು ಸದಸ್ಯರ ಅವಧಿ ಮುಕ್ತಾಯಗೊಂಡಿದ್ದರಿಂದ ಮಂಡಳಿಯ ಮರುರಚನೆ ಬಹುಕಾಲದಿಂದ ಬಾಕಿ ಇತ್ತು. 2017ರಲ್ಲಿ ಮರುರಚನೆಯಾಗಿದ್ದ ಹಿಂದಿನ ಮಂಡಳಿಯಲ್ಲಿ 12 ಸದಸ್ಯರಿದ್ದರು.

ಮಂಡಳಿಯ ಸದಸ್ಯರ ಬದಲಾವಣೆಯಾದರೂ, CBFCಯ ಕಾನೂನುಬದ್ಧ ಜವಾಬ್ದಾರಿಗಳು ಹಾಗೂ ಸಿನಿಮಾಗಳ ಪ್ರಮಾಣೀಕರಣಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದೇ ವೇಳೆ, ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಸೃಜನಶೀಲ ಸ್ವಾತಂತ್ರ್ಯ, ಸಾಮಾಜಿಕ ವಿಚಾರಗಳು ಮತ್ತು ನಿಯಂತ್ರಣದ ನಡುವಿನ ಚರ್ಚೆ ಮುಂದುವರಿದಿರುವ ಸಂದರ್ಭದಲ್ಲೇ ಹೊಸ ಮಂಡಳಿ ರಚನೆಯಾಗಿದೆ.

ಭಾರತದಲ್ಲಿ 48 ಗಂಟೆಗಳೊಳಗೆ ಸ್ಟ್ರೀಮಿಂಗ್ ಸ್ಥಗಿತ

ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಪ್ರಮಾಣೀಕರಣಕ್ಕೆ ಸಂಬಂಧಿಸಿದ ವಿವಾದಗಳು ಸಾಕಷ್ಟು ಗಮನ ಸೆಳೆದಿವೆ. ದಿಲ್ಜಿತ್ ದೋಸಾಂಜ್ ಅಭಿನಯದ 'ಸತ್ಲುಜ್' ಸಿನಿಮಾ, ಈ ಹಿಂದೆ ಪಂಜಾಬ್ 95 ಎಂಬ ಹೆಸರಿನಲ್ಲಿ ಘೋಷಣೆಯಾಗಿದ್ದು, ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ದೀರ್ಘ ವಿಳಂಬ ಎದುರಿಸಿತ್ತು. 2022ರಲ್ಲಿ CBFCಗೆ ಸಲ್ಲಿಕೆಯಾಗಿದ್ದ ಈ ಚಿತ್ರಕ್ಕೆ ಬರೋಬ್ಬರಿ 127 ಬದಲಾವಣೆಗಳನ್ನು ಸೂಚಿಸಲಾಗಿತ್ತು ಎನ್ನಲಾಗಿದೆ. ನಂತರ ಪರಿಷ್ಕೃತ ಹೆಸರಿನಲ್ಲಿ ZEE5ನಲ್ಲಿ ಚಿತ್ರ ಕಾಣಿಸಿಕೊಂಡಿದ್ದರೂ, ಭಾರತದಲ್ಲಿ 48 ಗಂಟೆಗಳೊಳಗೆ ಸ್ಟ್ರೀಮಿಂಗ್ ಸ್ಥಗಿತಗೊಂಡಿತ್ತು.

ಅದೇ ರೀತಿ, ಅಕ್ಷಯ್ ಕುಮಾರ್ ಅಭಿನಯದ ವೆಲ್‌ಕಮ್ ಟು ದ ಜಂಗಲ್ ಚಿತ್ರಕ್ಕೆ 18 ಬದಲಾವಣೆಗಳನ್ನು ಮಾಡಿದ ಬಳಿಕ UA 16+ ಪ್ರಮಾಣಪತ್ರ ದೊರೆತಿತ್ತು. ವಿಜಯ್ ಅಭಿನಯದ ಜನ ನಾಯಗನ್ ಚಿತ್ರವೂ ಪ್ರಮಾಣೀಕರಣ ವಿಳಂಬ ಹಾಗೂ ಕಾನೂನು ಹೋರಾಟದ ಕಾರಣ ಸುದ್ದಿಯಾಗಿತ್ತು.

ಸಲ್ಮಾನ್ ಖಾನ್ ಅಭಿನಯದ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಚಿತ್ರವೂ ಇನ್ನೂ CBFCಗೆ ಸಲ್ಲಿಕೆಯಾಗಿಲ್ಲ. ಈ ಸಿನಿಮಾ ಆರಂಭದಲ್ಲಿ 'ಬ್ಯಾಟಲ್ ಆಫ್ ಗಲ್ವಾನ್' ಎಂಬ ಹೆಸರಿನಲ್ಲಿ ಘೋಷಣೆಯಾಗಿದ್ದು, 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಸಂಘರ್ಷದ ಹಿನ್ನೆಲೆಯನ್ನು ಹೊಂದಿದೆ. ಚಿತ್ರದ ಕೆಲವು ಅಂಶಗಳ ಕುರಿತು ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ವರದಿಗಳೂ ಬಂದಿವೆ.

18 ಸದಸ್ಯರ ಹೊಸ ಮಂಡಳಿ ರಚನೆಯಾದರೂ, ಶಶಿ ಶೇಖರ್ ವೆಂಪತಿ ಅವರು CBFC ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರನ್ನು 2026ರ ಮೇ ತಿಂಗಳಲ್ಲಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+