ಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಗರ್ಭಿಣಿ ಪತ್ನಿಯ ಭಾವುಕ ನುಡಿ
ಮಿರ್ಯಾಲಗುಡ, ಸೆಪ್ಟೆಂಬರ್ 18: ಗರ್ಭದಲ್ಲೊಂದು ಪುಟ್ಟ ಕೂಸು ಚಿಗುರುತ್ತಿದೆ ಎಂಬ ಉಲ್ಲಾಸ, ಮನಸಾರೆ ಪ್ರೀತಿಸುವ ಪತಿ... ಈ ಸುಂದರ ಬದುಕು ಆಕೆಯ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ!
ಕಣ್ಣೆದುರಲ್ಲೇ ಪತಿ ರಕ್ತಸಿಕ್ತ ಶವವಾಗಿ ಬಿದ್ದಿದ್ದ... ಕ್ರೂರ ಜಾತಿಪದ್ಧತಿಯ ಅಣಕವೆಂಬಂತೆ! ಜಾತಿ, ಜಾತಿ ಎಂಬ ಸೂರೊಡೆಯುವ ಕೂಗಿನೆದುರಲ್ಲಿ ಮುಗ್ಧ ಪ್ರೇಮಕತೆಯೊಂದು ಮಕಾಡೆ ಮಲಗಿತ್ತು!
ತೆಲಂಗಾಣದ ಮಿರ್ಯಾಲಗುಡದಲ್ಲಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದ ಪ್ರಣಯ್ ಮತ್ತು ಅಮೃತಾ ಅವರು ತಮ್ಮ ಪುಟ್ಟ ಕುಟುಂಬಕ್ಕೆ ಇನ್ನೋರ್ವ ಮುದ್ದು ಅತಿಥಿಯನ್ನು ಬರಮಾಡಿಕೊಳ್ಳುವ ಸಮಯದಲ್ಲಿ ದುರಂತವೊಂದು ಘಟಿಸಿದೆ. ಅಮಾಯಕ ಪ್ರಣಯ್ ನನ್ನು ದುಷ್ಕರ್ಮಿಗಳು ಕೊಂದಿದ್ದಾರೆ. ಇಡೀ ದೇಶವೂ ಈ ದುರ್ಘಟನೆಗೆ ಕಂಬನಿ ಮಿಡಿದಿದೆ.
ಪ್ರೀತಿಸಿ ಮದುವೆಯಾಗಿದ್ದ ತನ್ನ ಪತಿಯನ್ನು ಕಳೆದುಕೊಂಡ ಗರ್ಭಿಣಿ ಅಮೃತಾ, 'ತನ್ನ ಪತಿಯ ಸಾವಿಗೆ ಜಾತಿಪದ್ಧತಿಯೇ ಕಾರಣ. ಮೊದಲು ಅದನ್ನು ಕಿತ್ತೆಸೆಯಬೇಕು' ಎಂದು ಆಕ್ರೋಶ ತುಂಬಿದ ಧ್ವನಿಯಲ್ಲಿ ಹೇಳಿದ್ದಾರೆ.

ಘಟನೆಯ ವಿವರ
ದಲಿತ ಕ್ರಿಶ್ಚಿಯನ್ ಆಗಿದ್ದ ಪ್ರಣಯ್ ಮತ್ತು ಹಿಂದೂ ವೈಶ್ಯ ಸಮುದಾಯಕ್ಕೆ ಸೇರಿದ್ದ ಅಮೃತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಮದುವೆ ಇಬ್ಬರ ಕುಟುಂಬಕ್ಕೂ ಇಷ್ಟವಿರಲಿಲ್ಲ. ಪ್ರಣಯ್ ಕುಟುಂಬ ಕೆಲದ ದಿನಗಳ ನಂತರ ದಂಪತಿಯನ್ನು ಒಪ್ಪಿಕೊಂಡರೂ ಅಮೃತಾ ಕುಟುಂಬ ಮಾತ್ರ ದ್ವೇಷ ಸಾಧಿಸುತ್ತಲೇ ಇತ್ತು. ಕಳೆದ ಜನವರಿಯಲ್ಲಿ ಮದುವೆಯಾಗಿದ್ದ ದಂಪತಿ, ಆಗಸ್ಟ್ ನಲ್ಲಿ ಆರತಕ್ಷತೆ ಸಹ ನಡೆಸಿದ್ದರು. ಅಮೃತಾ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆಯೇ ಆಕೆಯನ್ನು ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ಪತಿ ಪ್ರಣಯ್ ಕರೆದೊಯ್ದಿದ್ದ. ಆಸ್ಪತ್ರೆ ಒಳಗಿದ್ದ ಅಮೃತಾ ಅಲ್ಲಿಂದ ಹೊರಗೆ ಬರುವಷ್ಟರಲ್ಲಿ ಪತಿ ಶವವಾಗಿ ಬಿದ್ದಿದ್ದ!

ಜಾತಿಯೇ ನನ್ನ ಪತಿಯನ್ನು ಕೊಂದಿದ್ದು!
ನಾನು ನನ್ನ ಪತಿ ಪ್ರಣಯ್ ಗೆ ನ್ಯಾಯ ದೊರಕುವವರೆಗೂ ಹೋರಾಡುತ್ತೇನೆ. ಆತನನ್ನು ಕೊಂದವರಿಗೆ ಶಿಕ್ಷೆಯಾಗುವವರೆಗೂ ಆತನ ಆತ್ಮಕ್ಕೆ ಶಾಂತಿ ಇಲ್ಲ. ಈ ದೇಶದಲ್ಲಿ ಜಾತಿಪದ್ಧತಿ ನಿರ್ಮೂಲನೆಯಾಗಬೇಕು. ಆಗ ಮಾತ್ರ ದೇಶ ಉದ್ಧಾರವಾಗುತ್ತದೆ ಎಂದು ಪ್ರಣಯ್ ನನ್ನೊಂದಿಗೆ ಯಾವತ್ತೂ ಹೇಳುತ್ತಿದ್ದರು. ಜಾತಿಯ ಕಾರಣಕ್ಕಾಗಿ ಕೊಲೆಯಾಗುವುದು ಅಥವಾ ನನ್ನ ಹಾಗೆ ವಿಧವೆಯಾಗುವ ಸನ್ನಿವೇಶ ನಮ್ಮ ದೇಶದಲ್ಲಿ ಎಂದಿಗೂ ಬರಬಾರದು. ಅದಕ್ಕಾಗಿ ನಾನು ಹೋರಾಡುತ್ತೇನೆ. ಇದು ಪ್ರಣಯ್ ಆಸೆಯೂ ಹೌದು' ಎಂದು ಆಕ್ರೋಶ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ ಅಮೃತಾ.

ಕೊಲೆಯನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ!
ಪತಿಯನ್ನು ಕೊಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾಗ ಹಲವರು ಆ ಕೊಲೆಯನ್ನು ಸಮರ್ಥಿಸಿಕೊಂಡರು. ಇಂಥ ಅಮಾನವೀಯತೆಯನ್ನು, ಹಿಂಸೆಯನ್ನು, ಕ್ರೌರ್ಯವನ್ನು ಜನರು ಅದ್ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಎಂದು ಅಮೃತಾ ಪ್ರಶ್ನಿಸಿದ್ದಾರೆ. ಅಮೃತಾ ಮತ್ತು ಪ್ರಣಯ್ ಪ್ರೇಮವಿವಾಹದ ಕುರಿತು ತೆಲಂಗಾಣ ಪೊಲೀಸರಿಗೂ ಅರಿವಿದ್ದರಿಂದ ಪ್ರಣಯ್ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಪೊಲಿಸರೂ ಮಾಹಿತಿ ಣೀಡಿದ್ದರು. ಆದರೆ ಅದನ್ನು ದಂಪತಿ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಪತಿಯ ಸಾವಿಗೆ ತಂದೆಯೇ ಕಾರಣ
ತನ್ನ ಪತಿಯ ಸಾವಿಗೆ ತಂದೆ ಮಾರುತಿ ರಾವ್ ಕಾರಣ ಎಂದು ಸ್ವತಃ ಅಮೃತಾ ದೂರಿದ್ದಾರೆ. ನಮ್ಮ ತಂದೆಗೆ ನಾನು ಬೇರೆ ಜಾತಿಯ ಹುಡುಗನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಆದ್ದರಿಂದ ಸದಾ ಪ್ರಣಯ್ ಗೆ ಬೆದರಿಕೆ ಹಾಕುತ್ತಿದ್ದರು. ನನ್ನ ಎದುರಲ್ಲೇ ಆತನನ್ನು ಕೊಲ್ಲುವುದಾಗಿ ಹಲವು ಬಾರಿ ಬೆದರಿಸಿದ್ದರು. ತಂದೆಗೆ ಸ್ಥಳೀಯ ರಾಜಕಾರಣಿಗಳ ಸಂಪರ್ಕವೂ ಇದ್ದು, ಅವರ ಕಡೆಯಿಂದಲೂ ನಮಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಕೊಲೆಯನ್ನು ನನ್ನ ತಂದೆಯಲ್ಲದೆ ಬೇರೆ ಯಾರೂ ಮಾಡಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಮೃತಾ ಖಚಿತವಾಗಿ ನುಡಿಯುತ್ತಾರೆ.

ಗರ್ಭಪಾತ ಮಾಡಿಸಿಕೋ ಎಂದಿದ್ದರು ಅಪ್ಪ!
ನೀನು ಗರ್ಭಪಾತ ಮಾಡಿಸಿಕೊಂಡು ಬಿಡು ಎಂದು ನನ್ನ ಬಳಿ ಹಲವು ಬಾರಿ ಅಪ್ಪ ಹೇಳುತ್ತಿದ್ದರು. ಆದರೆ ಅವರ ಉದ್ದೇಶವೇನಾಗಿತ್ತು ಎಂಬುದು ನನಗೆ ಈಗ ಅರ್ಥವಾಗುತ್ತಿದೆ. ಪ್ರಣಯ್ ನನ್ನು ಕೊಂದ ಮೇಲೆ ಅವರಿಗಿದ್ದ ಒಂದೇ ಅಡೆತಡೆಯೆಂದರೆ ನನ್ನ ಮಗು. ನಾನು ಗರ್ಭಪಾತ ಮಾಡಿಕೊಂಡರೆ ಆ ಅಡ್ಡಿಯೂ ಇರುವುದಿಲ್ಲ, ನನ್ನನ್ನು ವಾಪಸ್ ಕರೆಸಿಕೊಂಡು ಬಿಡಬೇಕು ಎಂಬುದು ಅವರ ಇಂಗಿತವಾಗಿತ್ತು. ಆದರೆ ನಾನು ಸತ್ತರೂ ಅವರೊಂದಿಗೆ ಹೋಗಲಾರೆ. ನನ್ನ ಪತಿಯನ್ನು ಕೊಂದ ನನ್ನ ತಂದೆ-ತಾಯಿ ನನಗೆ ಬೇಕಿಲ್ಲ ಎಂದು ಬಿಕ್ಕುತ್ತ ಹೇಳುತ್ತಾರೆ ಅಮೃತಾ.












Click it and Unblock the Notifications