Delhi Election: ₹21 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶ
ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಮುಖ ಮೂರು ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ಮತ ಕೇಳುತ್ತಿವೆ. ಎರಡು ಬಾರಿ ಅಧಿಕಾರದ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯನ್ನು ಮರಳಿ ಪಡೆಯಲು ಪ್ರಯತ್ನ ಮಾಡುತ್ತಿವೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 21.89 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಣ, ಮದ್ಯ, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ಒಂದು ವಾರದೊಳಗೆ ಇಷ್ಟು ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮತದಾನ ಮುಗಿಯುವ ವೇಳೆಗೆ ನೂರಾರು ಕೋಟಿ ಮೌಲ್ಯದ ಅಕ್ರಮ ಮದ್ಯ, ಚಿನ್ನ, ಬೆಳ್ಳಿ, ನಗದು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯು ಮುಟ್ಟುಗೋಲು ಹಾಕಿಕೊಂಡ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದು, ₹9.8 ಕೋಟಿ ನಗದು, ₹6.1 ಕೋಟಿ ಮೌಲ್ಯದ ಅಮೂಲ್ಯ ಚಿನ್ನ, ಬೆಳ್ಳಿ, ₹5.05 ಕೋಟಿ ಮೌಲ್ಯದ ಮಾದಕ ವಸ್ತುಗಳು, ₹47 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಉಚಿತ ವಸ್ತುಗಳು ಮತ್ತು ₹45 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ ಸೇರಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 5ರಂದು ಮತದಾನ
ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದ ಬಳಿಕ ಜನವರಿ 7ರಿಂದ ದೆಹಲಿಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ದೆಹಲಿ ಕ್ಷೇತ್ರದಲ್ಲಿ ಹೆಚ್ಚು
ಚುನಾವಣಾ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ದೆಹಲಿ ಕ್ಷೇತ್ರದಲ್ಲಿ ಹೆಚ್ಚಿನ ಚುನಾವಣಾ ಅಕ್ರಮ ನಡೆದಿದೆ. ಈ ಕ್ಷೇತ್ರದಲ್ಲಿ ₹4.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪೂರ್ವ ದೆಹಲಿಯಲ್ಲಿ ₹3.12 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆಗ್ನೇಯ ಮತ್ತು ಉತ್ತರ ದೆಹಲಿ ಜಿಲ್ಲೆಗಳಲ್ಲಿ ₹1 ಕೋಟಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹರಿಯಾಣದ ಗಡಿಯಲ್ಲಿರುವ ನೈಋತ್ಯ ದೆಹಲಿಯಲ್ಲಿ ಹೆಚ್ಚಿನ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ನಗದು ಮತ್ತು ಮಾದಕ ವಸ್ತುಗಳ ಜೊತೆಗೆ 14,200 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications