ತೆಲಂಗಾಣ, ರಾಜಸ್ಥಾನ ಚುನಾವಣೆ : ಪ್ರಚಾರ ಅಂತ್ಯ, ಡಿ.7ಕ್ಕೆ ಮತದಾನ
ಬೆಂಗಳೂರು, ಡಿಸೆಂಬರ್ 05 : ತೆಲಂಗಾಣ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಡಿಸೆಂಬರ್ 7ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಜಸ್ಥಾನದಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಲಂಗಾಣದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಎರಡೂ ರಾಜ್ಯದಲ್ಲಿಯೂ ಡಿಸೆಂಬರ್ 7ರ ಶುಕ್ರವಾರ ಚುನಾವಣೆ ನಡೆಯಲಿದೆ.
ರಾಜಸ್ಥಾನದಲ್ಲಿ 200 ಕ್ಷೇತ್ರಗಳಿಗೆ ಮತ್ತು ತೆಲಂಗಾಣ ರಾಜ್ಯದ 119 ಕ್ಷೇತ್ರಗಳಿಗೆ ಮತದಾನ ಶುಕ್ರವಾರ ನಡೆಯಲಿದೆ. ಅಭ್ಯರ್ಥಿಗಳು ಇಂದಿನಿಂದ ಮನೆ-ಮನೆ ಪ್ರಚಾರವನ್ನು ನಡೆಸಲಿದ್ದಾರೆ. ಡಿಸೆಂಬರ್ 11ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

119 ಕ್ಷೇತ್ರಗಳು
2017ರ ಸೆಪ್ಟೆಂಬರ್ 6ರಂದು ತೆಲಂಗಾಣ ವಿಧಾನಸಭೆಯನ್ನು ವಿಸರ್ಜನೆ ಮಾಡಲಾಗಿತ್ತು. 119 ಕ್ಷೇತ್ರಗಳನ್ನು ಹೊಂದಿರುವ ವಿಧಾನಸಭೆಗೆ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ. 2014ರ ಚುನಾವಣೆಯಲ್ಲಿ ಕೆ.ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ 63 ಕ್ಷೇತ್ರಗಳಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು. ಆದರೆ, ಅವಧಿಗೂ ಮೊದಲೇ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚಂದ್ರಶೇಖರರಾವ್ ಚುನಾವಣೆಗೆ ಹೋಗಿದ್ದಾರೆ.

ರಾಜಸ್ಥಾನ ರಾಜ್ಯ
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ. 2013ರಲ್ಲಿ 163 ಸ್ಥಾನಗಳನ್ನು ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಬಿಜೆಪಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ಎದುರಾಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಭಾರಿ ಕಸರತ್ತು ನಡೆಸಿದೆ. ಯಾರಿಗೆ ಗೆಲುವು ಎಂಬುದು ಡಿಸೆಂಬರ್ 11ರಂದು ತೀರ್ಮಾನವಾಗಲಿದೆ.

ಘಟಾನುಘಟಿ ನಾಯಕರ ಪ್ರಚಾರ
ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯದಲ್ಲಿ ಘಟಾನುಘಟಿ ನಾಯಕರು ಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ 10ಕ್ಕೂ ಅಧಿಕ ಸಮಾವೇಶ ನಡೆಸಿ, ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದಾರೆ. ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರು ಸಹ ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ.

ಅಮ್ಮ-ಮಗನ ಪ್ರಚಾರ
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತೆಲಂಗಾಣದಲ್ಲಿ ಜಂಟಿಯಾಗಿ ಪ್ರಚಾರ ನಡೆಸಿದ್ದರು.












Click it and Unblock the Notifications