Budget Air cooler: 1,800 ರೂಗೆ ಎಸಿ ತಯಾರಿಸಿದ 16ರ ಬಾಲಕಿ! ಒಂದು ಗಂಟೆಯಲ್ಲಿ 4-5 ಡಿಗ್ರಿ ತಂಪು, ಕರೆಂಟ್ ಬಿಲ್‌ಗೂ ಗುಡ್‌ಬೈ

ತಂಪು ನಗರ ಎನಿಸಿಕೊಂಡಿದ್ದ ಬೆಂಗಳೂರು ಕೂಡ ಈಗ ಬೇಸಿಗೆ ಬಂದರೆ ಕುದಿಯತೊಡಗುತ್ತದೆ. ದೇಶದ ಹಲವಾರು ನಗರಗಳಲ್ಲಿ ಇದೇ ಕತೆ. ಹೀಗಾಗಿ ಏರ್‌ ಕಂಡಿಷನರ್‌ಗಳಿಗೆ, ರೂಮ್‌ ಕೂಲರ್‌ಗಳಿಗೆ ಹೆಚ್ಚಿನ ಬೇಡಿಕೆ ಬರ್ತಾ ಇದೆ. ಅಂಥದೊಂದು ಏರ್‌ ಕಂಡೀಷನರ್‌ ತಮಗೂ ಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ದುಬಾರಿ ಬೆಲೆ, ವಿದ್ಯುತ್ ಬಿಲ್‌ಗಳ ಭಯದಿಂದ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಎಸಿ (Budget Air cooler) ಎನ್ನುವುದು ಇನ್ನೂ ಕೈಗೆಟುಕದ ವಸ್ತುವೇ ಆಗಿದೆ.

Budget Air cooler 16-Year-Old Girl Builds an AC for Just 1 800 Cools Room by 4-5 Degrees in an Hour

ಆದರೆ ಉತ್ತರ ಪ್ರದೇಶದ ಝಾನ್ಸಿಯ 16 ವರ್ಷದ ಬಾಲಕಿಯೊಬ್ಬಳು ಇದಕ್ಕೆ ವಿಭಿನ್ನವಾದ ಪರಿಹಾರವೊಂದನ್ನು ಹುಡುಕಿದ್ದಾಳೆ. ಕೇವಲ 1,800 ರೂಪಾಯಿ ಖರ್ಚು ಮಾಡಿ 'ದೇಸಿ ಎಸಿ' ಎಂಬ ಹೆಸರಿನ ಕಡಿಮೆ ವೆಚ್ಚದ ಏರ್‌ ಕೂಲಿಂಗ್ ಸಾಧನವನ್ನು ತಯಾರಿಸಿದ್ದಾಳೆ.

ಆಕೆಯ ಹೆಸರು ಕಲ್ಯಾಣಿ ಶ್ರೀವಾಸ್ತವ. ವರದಿಗಳ ಪ್ರಕಾರ, ಈ ಸಾಧನವನ್ನು ಬಳಸಿದ ಒಂದು ಗಂಟೆಯಲ್ಲಿ ಕೋಣೆಯ ತಾಪಮಾನ ಸುಮಾರು 4ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಬಹುದು. ಇದರಿಂದ ಈಕೆ ಈಗ ಎಲ್ಲರ ಗಮನ ಸೆಳೆಯುತ್ತಿದಾಳೆ.

Budget Air cooler ಥರ್ಮೋಕೋಲ್ ಬಾಕ್ಸ್, 12 ವೋಲ್ಟ್ ಫ್ಯಾನ್!

ಕಲ್ಯಾಣಿ ತಯಾರಿಸಿರುವ 'ದೇಸಿ ಎಸಿ'ಯ ವಿನ್ಯಾಸ ಸರಳವಾಗಿದೆ. ಇದರಲ್ಲಿ ಥರ್ಮೋಕೋಲ್‌ನಿಂದ ತಯಾರಿಸಿದ ಐಸ್‌ಬಾಕ್ಸ್ ಬಳಸಲಾಗಿದೆ. ಅದರೊಳಗಿನ ತಂಪಾದ ಗಾಳಿಯನ್ನು ಹೊರಗೆ ತಳ್ಳಲು 12 ವೋಲ್ಟ್ ಡಿಸಿ ಫ್ಯಾನ್ ಬಳಸಲಾಗಿದೆ. ಫ್ಯಾನ್ ಗಾಳಿಯನ್ನು ಒಳಗೆಳೆದುಕೊಂಡು ತಂಪಾದ ಭಾಗದ ಮೂಲಕ ಹೊರಗೆ ಕಳುಹಿಸುತ್ತದೆ. ಈ ಮೂಲಕ ಸಾಮಾನ್ಯ ಎಸಿಯಂತೆಯೇ ತಂಪಾದ ಗಾಳಿ ಕೋಣೆಯೊಳಗೆ ಹರಡುತ್ತದೆ. ಇದರ ವಿಶೇಷತೆಯೆಂದರೆ, ಸಾಂಪ್ರದಾಯಿಕ ಏರ್‌ ಕಂಡೀಷನರ್‌ಗಳಿಗೆ ಹೋಲಿಸಿದರೆ ಇದರ ನಿರ್ಮಾಣ ವೆಚ್ಚ ಬಹಳ ಕಡಿಮೆ.

'ದೇಸಿ ಎಸಿ'ಯ ಮತ್ತೊಂದು ಪ್ರಮುಖ ಅಂಶವೆಂದರೆ ಇದು ಸೌರಶಕ್ತಿಯ (solar energy) ಮೂಲಕ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದು. ಹೀಗಾಗಿ ಸಾಮಾನ್ಯ ಎಸಿ ಬಳಸಿದಾಗ ಬರುವಂತೆ ಭಾರಿ ವಿದ್ಯುತ್ ಬಿಲ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ವಿಶೇಷವಾಗಿ ಬಿಸಿಲು ಹೆಚ್ಚಾಗಿರುವ ಬುಂದೇಲ್‌ಖಂಡ್‌ನಂತಹ ಪ್ರದೇಶಗಳಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ತಂಪು ಪಡೆಯುವ ಆಲೋಚನೆ ಗಮನಾರ್ಹವಾಗಿದೆ.

ಜೊತೆಗೆ ಸಾಂಪ್ರದಾಯಿಕ ಏರ್‌ ಕಂಡೀಷನರ್‌ಗಳಲ್ಲಿ ಬಳಸುವ ಕೆಲವು ಶೀತಕಗಳ ಸಮಸ್ಯೆಯಿಂದ ಪರಿಸರದ ಮೇಲೆ ಬೀಳಬಹುದಾದ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶವೂ ಇದರಲ್ಲಿದೆ.

'ಎಲ್ಲರಿಗೂ ಎಸಿ ಸಿಗಬೇಕು' ಎಂಬ ಆಲೋಚನೆ

ಕಲ್ಯಾಣಿ ಬುಂದೇಲ್‌ಖಂಡ್ ಪ್ರದೇಶದವಳು. ಈ ಭಾಗದಲ್ಲಿ ಬೇಸಿಗೆಯ ಬಿಸಿಲು ತೀವ್ರವಾಗಿರುತ್ತದೆ. ಆದರೆ ಅಲ್ಲಿನ ಪ್ರತಿಯೊಬ್ಬರಿಗೂ ದುಬಾರಿ ಎಸಿ ಖರೀದಿಸುವುದು ಸಾಧ್ಯವಿಲ್ಲ. ಈ ಸಮಸ್ಯೆಯೇ ತನ್ನ ಆಲೋಚನೆ, ಆವಿಷ್ಕಾರಕ್ಕೆ ಕಾರಣವಾಯಿತು ಎಂದು ಕಲ್ಯಾಣಿ ಹೇಳಿಕೊಂಡಿದ್ದಾಳೆ.

'ಬುಂದೇಲ್‌ಖಂಡ್‌ನ ಜನರಿಗೆ ಎಸಿ ಖರೀದಿಸುವುದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿನ ಬಿಸಿಲನ್ನು (Summer) ಸಹಿಸುವುದೂ ಕಷ್ಟ. ಹಾಗಾಗಿ ಈ ಆಲೋಚನೆ ಬಂತು. ಅದನ್ನು ಕಾರ್ಯರೂಪಕ್ಕೆ ತಂದೆ' ಎಂದು ಆಕೆ ಹೇಳಿರುವುದಾಗಿ ವರದಿಗಳು ತಿಳಿಸಿವೆ. ಕೇವಲ ಆಲೋಚನೆ ಮಾಡುವುದರಲ್ಲಿ ನಿಲ್ಲದೆ, ಅದನ್ನು ಒಂದು ಮಾದರಿಯಾಗಿ ರೂಪಿಸಿರುವುದು ಕಲ್ಯಾಣಿಯ ವಿಶೇಷತೆ.

ಐಐಟಿ ದೆಹಲಿ ಮಟ್ಟದ ಸ್ಪರ್ಧೆಗೆ ಆಯ್ಕೆ

ಕಲ್ಯಾಣಿಯ ಈ 'ದೇಸಿ ಎಸಿ' ಯೋಜನೆಗೆ ಮತ್ತೊಂದು ದೊಡ್ಡ ಮಾನ್ಯತೆಯೂ ಸಿಕ್ಕಿದೆ. ಐಐಟಿ ದೆಹಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾದರಿ ಸ್ಪರ್ಧೆಗೆ ಈ ಯೋಜನೆಯನ್ನು ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರ ಮತ್ತು 'ಅಮರ್ ಉಜಾಲಾ' ಪತ್ರಿಕೆ ಜಂಟಿಯಾಗಿ ನಡೆಸಿದ 'ನಾರಿ ಸಮ್ಮಾನ್' ಯೋಜನೆಯ ಭಾಗವಾಗಿಯೂ ಕಲ್ಯಾಣಿಗೆ ಗೌರವ ದೊರೆತಿದೆ. ಅಂದರೆ ₹1,800ರ ಒಂದು ಸಣ್ಣ ಪ್ರಯೋಗ, ದೊಡ್ಡ ವೇದಿಕೆಯಲ್ಲಿ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ.

ಕಲ್ಯಾಣಿಗೆ ವಿಜ್ಞಾನ ಮತ್ತು ಆವಿಷ್ಕಾರದಲ್ಲಿ ಆಸಕ್ತಿ. ಅಷ್ಟೇ ಅಲ್ಲ. ಆಕೆ ಉತ್ತಮ ಗಾಯಕಿಯೂ ಆಗಿದ್ದು, ಜನಪ್ರಿಯ ಟಿವಿ ಸಂಗೀತ ರಿಯಾಲಿಟಿ ಶೋ 'ಇಂಡಿಯನ್ ಐಡಲ್'ನ ಮೂರನೇ ಸುತ್ತಿನವರೆಗೆ ತಲುಪಿದ್ದಾಳೆ! ಲಖನೌ, ಆಗ್ರಾ ಮತ್ತು ಕಾನ್ಪುರಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 50ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವುದಾಗಿಯೂ ವರದಿಗಳು ಹೇಳುತ್ತವೆ.

ಹೀಗಾಗಿ ವಿಜ್ಞಾನ ಮತ್ತು ಸಂಗೀತ ಎರಡರಲ್ಲೂ ತನ್ನ ಪ್ರತಿಭೆಯನ್ನು ತೋರಿಸುತ್ತಿರುವ ಕಲ್ಯಾಣಿ, ಓದಿನ ಜತೆಗೆ ಸೃಜನಶೀಲತೆಯನ್ನೂ ಬೆಳೆಸಿಕೊಂಡಿರುವ ಯುವ ಪ್ರತಿಭೆಯಾಗಿ ಗಮನ ಸೆಳೆದಿದ್ದಾಳೆ.

ಕಲ್ಯಾಣಿಯ ಆವಿಷ್ಕಾರಕ್ಕೆ ವಿದೇಶದಲ್ಲಿಯೂ ಗಮನ ಸಿಕ್ಕಿದೆ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ. ತನ್ನ ಯೋಜನೆಯನ್ನು ಗಮನಿಸಿದ ಜಪಾನ್‌ನ ವಿಜ್ಞಾನಿಗಳು ಸೆಮಿನಾರ್‌ಗೆ ಆಹ್ವಾನಿಸಿದ್ದಾರೆ ಎಂದು ಕಲ್ಯಾಣಿ ಹೇಳಿಕೊಂಡಿದ್ದಾಳೆ. ತನ್ನ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಿದ ಪೋಷಕರು ಮತ್ತು ಶಿಕ್ಷಕರಿಗೂ ಆಕೆ ಧನ್ಯವಾದ ಸಲ್ಲಿಸಿದ್ದಾಳೆ.

1,800 ರೂಪಾಯಿಗೆ ತಯಾರಿಸಿದ ಈ ಸಾಧನ ನಿಜವಾಗಿಯೂ ಮನೆಯಲ್ಲಿರುವ ಸಾಮಾನ್ಯ ಏರ್‌ ಕಂಡೀಷನರ್‌ಗೆ ಸಂಪೂರ್ಣ ಪರ್ಯಾಯವಾಗಬಹುದೇ ಎಂಬುದು ಬೇರೆ ಪ್ರಶ್ನೆ. ಆದರೆ ಇದರ ಹಿಂದಿರುವ ಆಲೋಚನೆ ಮಾತ್ರ ಗಮನಾರ್ಹ. ಟೆಕ್ನಾಲಜಿ ಎಂದರೆ ಯಾವಾಗಲೂ ದುಬಾರಿ ಯಂತ್ರಗಳೇ ಆಗಬೇಕಿಲ್ಲ. ಸ್ಥಳೀಯ ಸಮಸ್ಯೆಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಪರಿಹಾರ ಹುಡುಕುವುದೂ ಆವಿಷ್ಕಾರವೇ.

ಬುಂದೇಲ್‌ಖಂಡ್‌ನ ಬಿಸಿಲು, ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಸೌರಶಕ್ತಿಯ ಲಭ್ಯತೆ-ಈ ಮೂರು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು 16 ವರ್ಷದ ಬಾಲಕಿ ರೂಪಿಸಿದ 'ದೇಸಿ ಎಸಿ' ಬಡವರಿಗೆ ಪ್ರಿಯವಾಗಬಲ್ಲದು. ಒಂದು ಸಣ್ಣ ಥರ್ಮೋಕೋಲ್ ಬಾಕ್ಸ್‌ನಿಂದ ಶುರುವಾದ ಪ್ರಯೋಗವಿದು. ಕಲ್ಪನೆ ಮತ್ತು ಪ್ರಯತ್ನಕ್ಕೆ ಸರಿಯಾದ ಅವಕಾಶ ಸಿಕ್ಕರೆ ಅದು ಎಷ್ಟು ದೂರವೂ ಹೋಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+