Budget 2025: ರಸ್ತೆಯಿಂದ ರೈಲ್ವೆಯತ್ತ ವಾಲಿದ ಸರ್ಕಾರದ ಚಿತ್ತ
ನವದೆಹಲಿ, ಜನವರಿ 23: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿಯೇ ಸಾರಿಗೆ ವಲಯಕ್ಕೆ ಯಾವ ಯಾವ ಕೊಡುಗೆ ಸಿಗಬಹುದು? ಎಂದು ಈಗ ಲೆಕ್ಕಾಚಾರ ಹಾಕಲಾಗುತ್ತಿದೆ.
ಬಜೆಟ್‌ನಲ್ಲಿ ಸಾರಿಗೆ ವಲಯದ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಭೂ ಸಾರಿಗೆಯಿಂದ ಗಮನವನ್ನು ರೈಲ್ವೆ ಕಡೆಗೆ ಹೆಚ್ಚು ಹರಿಸುತ್ತಿದ್ದು, ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ನೀಡುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಸಾರಿಗೆ ಮಾದರಿಯಲ್ಲಿಯೇ ರೈಲ್ವೆ ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಆದ್ದರಿಂದ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಯ ಆಧುನೀಕರಣ, ಪ್ರಯಾಣಿಕರ ಸುರಕ್ಷತೆ, ರೈಲು ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನ: ರೈಲ್ವೆ ಮತ್ತು ಭೂ ಸಾರಿಗೆ ವಲಯಕ್ಕೆ ಎಷ್ಟು ಅನುದಾನ ನೀಡಲಾಗುತ್ತದೆ? ಎಂಬ ಚರ್ಚೆಗಳು ಸಾಗಿವೆ. ಇಂತಹ ಹೊತ್ತಿನಲ್ಲಿ ಅಧಿಕಾರಿಗಳು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಾರಿಗೆ ಸೇವೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂಬ ಮಾಹಿತಿ ಇದೆ.
2027ರ ಮಾರ್ಚ್ ವೇಳೆಗೆ ದೇಶದಲ್ಲಿ 400 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಗುರಿ ಹೊಂದಲಾಗಿದೆ. ಅಲ್ಲದೇ ರೈಲಿನಲ್ಲಿ ಸರಕು ಸಾಗಾಟಕ್ಕೆ ಸಹ ಆದ್ಯತೆ ನೀಡಬೇಕು, ಆ ಮೂಲಕ ಆದಾಯ ಸಂಗ್ರಹಣೆ ಮಾಡಲು ಚಿಂತಿಸಲಾಗಿದ್ದು, ಈ ಕುರಿತು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ.
ರಸ್ತೆ ಮತ್ತು ಭೂ ಸಾರಿಗೆ ಇಲಾಖೆಗೆಯ ಅನುದಾನ ಈ ಬಾರಿ ಶೇ 3 ರಿಂದ 4ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಭೂ ಸಾರಿಗೆ ಜಾಲವನ್ನು 146,000 ಕಿ. ಮೀ.ಗೆ ವಿಸ್ತರಣೆ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ರೈಲ್ವೆ ಜಾಲ 68,000 ಕಿ. ಮೀ.ಗೂ ಅಧಿಕವಾಗಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ಇದೆ.
ವಿವಿಧ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನದ ಕಾರಣ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬಜೆಟ್‌ನಲ್ಲಿ ರೈಲ್ವೆ ಇಲಾಖೆಯ ಆದಾಯವನ್ನು ಶೇ 2 ರಿಂದ 3ಕ್ಕೆ ಏರಿಕೆ ಮಾಡಿದರೆ ಭೂ ಸ್ವಾಧೀನ ಚುರುಕುಗೊಳಿಸಿ ಯೋಜನೆಯನ್ನು ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ರೈಲು ಯೋಜನೆ 2030ರ ಅಡಿ ರೈಲ್ವೆ ಇಲಾಖೆಯ ಆಧುನೀಕರಣಕ್ಕೆ ಹಲವಾರು ಯೋಜನೆ ರೂಪಿಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸೌಲಭ್ಯಗಳು, ನಿಲ್ದಾಣದ ಅಭಿವೃದ್ಧಿ, ರೈಲು ಸಂಪರ್ಕ ಜಾಲ ವಿಸ್ತರಣೆ ಇದರಲ್ಲಿ ಸೇರಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ಬಜೆಟ್‌ನಲ್ಲಿ ನೀಡಿದ್ದ ಅನುದಾನದಲ್ಲಿ ಶೇ 54ರಷ್ಟನ್ನು ನವೆಂಬರ್‌ನಲ್ಲಿ ಬಳಕೆ ಮಾಡಿತ್ತು. ಆದರೆ ರೈಲ್ವೆ ಇಲಾಖೆ ಶೇ 76ರಷ್ಟು ಬಳಕೆ ಮಾಡಿತ್ತು. ರಸ್ತೆ ಸಾರಿಗೆ ಇಲಾಖೆ ಟೋಲ್ ಸಂಗ್ರಹದ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುತ್ತದೆ. ಆದ್ದರಿಂದ ರೈಲ್ವೆ ಇಲಾಖೆಗೆ ಬಜೆಟ್ ಹೆಚ್ಚಿನ ಒತ್ತು ನೀಡಲಾಗುತ್ತದೆ.












Click it and Unblock the Notifications