Budget 2025: ನರೇಗಾ ಯೋಜನೆಯ ವೇತನ ಹೆಚ್ಚಳಕ್ಕೆ ಒತ್ತಾಯ
ನವದೆಹಲಿ, ಜನವರಿ 28: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಪ್ರತಿಪಕ್ಷವಾದ ಕಾಂಗ್ರೆಸ್ ಬಜೆಟ್ ಕುರಿತು ಮಹತ್ವದ ಬೇಡಿಕೆಯನ್ನು ಮುಂದಿಟ್ಟಿದೆ. ಬಜೆಟ್ ಭಾಷಣದಲ್ಲಿ ಈ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಕುರಿತು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಯೊಂದನ್ನು ಇಟ್ಟಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಆಧಾರಿತ ಕೂಲಿ ಉದ್ಯೋಗ ನೀಡುವ ಕಾರ್ಯಕ್ರಮ ಇದಾಗಿದೆ.

ವೇತನ ಹೆಚ್ಚಳಕ್ಕೆ ಕಾಂಗ್ರೆಸ್ ಆಗ್ರಹ: ಕಾಂಗ್ರೆಸ್ ನರೇಗಾ ಯೋಜನೆಯಡಿ ನೀಡುವ ವೇತನವನ್ನು ದಿನಕ್ಕೆ 400 ರೂ. ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ. ಅಲ್ಲದೇ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ಯೋಜನೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ರಾಷ್ಟ್ರೀಯ ಕನಿಷ್ಠ ವೇತನವಾಗಿ ನರೇಗಾ ಅಡಿ ದಿನಕ್ಎಕ 400 ರೂ. ಗುರಿ ಇಟ್ಟುಕೊಂಡು ವೇತನವನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ 298 ರೂ. ತನಕ ವೇತನವನ್ನು ನೀಡಲಾಗುತ್ತಿದೆ. ಇದನ್ನು ಪರಿಷ್ಕರಣೆ ಮಾಡಲು ಕಾಂಗ್ರೆಸ್ ಒತ್ತಾಯಿಸಿದೆ.
ನರೇಗಾ ವೇತನದಲ್ಲಿ ಬದಲಾವಣೆಯನ್ನು ತರಲು ಮೌಲ್ಯ ಮಾಪನ ಮಾಡಲು ಸ್ಥಾಯಿ ಸಮಿತಿಯನ್ನು ರಚನೆ ಮಾಡಬೇಕು. ಸರ್ಕಾರ ಅನಿಯಂತ್ರಿತ ಉದ್ದೇಶದಿಂದ ನರೇಗಾ ಯೋಜನೆಯಡಿ ಇರುವ ವೇತನವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಅಲ್ಲದೇ ನರೇಗಾ ಅಡಿ ಸದ್ಯ ಇರುವ 100 ದಿನದ ಕೆಲಸದ ಅವಧಿಯನ್ನು 150 ದಿನಗಳಿಗೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿದೆ. ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಸಹಕಾರಿಯಾಗಿದೆ ಎಂದು ಹೇಳಿರುವ ಕಾಂಗ್ರೆಸ್, ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದೆ.
ಸಂಸತ್‌ನಲ್ಲಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಅಪಹಾಸ್ಯ ಮಾಡಿದ್ದಾರೆ. ಇದು ಯೋಜನೆ ಕುರಿತು ಪ್ರಧಾನಿಗಳ ಅಸಡ್ಡೆಯನ್ನು ತೋರಿಸುತ್ತದೆ. 2019-20ರಲ್ಲಿ 6.16 ಕೋಟಿ ಕುಟುಂಬಗಳು ಯೋಜನೆಯಡಿ ಕೆಲಸ ಮಾಡಲು ಮನವಿ ಮಾಡಿದ್ದವು. 2020-21ರಲ್ಲಿ ಕುಟುಂಬಗಳ ಸಂಖ್ಯೆ 8.55 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇವುಗಳನ್ನು ನಿರ್ವಹಣೆ ಮಾಡುತ್ತದೆ. ಕೇಂದ್ರ ಸರ್ಕಾರವು ಕೆಲಸದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಲಭ್ಯವಾಗುವಂತೆ ಮಾಡುತ್ತದೆ. ಕಾರ್ಮಿಕ ಬಜೆಟ್, ಆರಂಭಿಕ ಬಾಕಿ, ಹಿಂದಿನ ವರ್ಷದ ಬಾಕಿ ಇರುವ ಹೊಣೆಗಾರಿಕೆಗಳು ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಸಚಿವಾಲಯವು ಹಣವನ್ನು ಬಿಡುಗಡೆ ಮಾಡುತ್ತದೆ. ಹೆಚ್ಚುವರಿ ನಿಧಿಯನ್ನು ಅಗತ್ಯವಿದ್ದಾಗ ಮತ್ತು ಕೆಲಸದ ಬೇಡಿಕೆಯ ಮೇಲೆ ಪೂರೈಸಲಾಗುತ್ತದೆ.












Click it and Unblock the Notifications