Budget 2024: ಮುದ್ರಾ ಯೋಜನೆಯ ಸಾಲದ ಮಿತಿ ಏರಿಕೆ
ನವದೆಹಲಿ, ಜುಲೈ 23: ಮಂಗಳವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು.
ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ ನೀಡಿದೆ. ಲೋಕಸಭೆ ಚುನಾವಣೆ 2024 ಮುಗಿದ ಬಳಿಕ ನರೇಂದ್ರ ಮೋದಿ ಸರ್ಕಾರ ಮಂಡನೆ ಮಾಡುತ್ತಿರುವ ಮೊದಲ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ.

ಬಜೆಟ್ ಭಾಷಣದಲ್ಲಿ ಸಚಿವರು, 'ಪ್ರಧಾನಮಂತ್ರಿ ಮುದ್ರಾ ಯೋಜನೆ'ಯ ಸಾಲದ ಮಿತಿಯನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು. ಸದ್ಯ ಯೋಜನೆಯಡಿ 10 ಲಕ್ಷ ರೂ. ತನಕ ಸಾಲ ಪಡೆಯಲು ಅವಕಾಶವಿದೆ.
ಮುದ್ರಾ ಯೋಜನೆಯಡಿ ಪಡೆದ 10 ಲಕ್ಷ ರೂ. ಸಾಲವನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದ ತರುಣ್ ವರ್ಗದವರು 20 ಲಕ್ಷ ರೂ. ತನಕ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹಣಕಾಸು ಸಚಿವರು ಘೋಷಣೆ ಮಾಡಿದರು.
ಕೇಂದ್ರ ಸರ್ಕಾರ 2015ರ ಏಪ್ರಿಲ್‌ನಲ್ಲಿ 'ಪ್ರಧಾನ ಮಂತ್ರಿ ಮುದ್ರಾ ಯೋಜನೆ'ಯನ್ನು ಆರಂಭಿಸಿತು. ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ 10 ಲಕ್ಷ ರೂ. ತನಕ ಸುಲಭವಾಗಿ ಸಾಲ ನೀಡಲು ಈ ಯೋಜನೆ ಆರಂಭಿಸಲಾಗಿದೆ.
ಆದಾಯ ಉತ್ಪಾದಿಸುವ ಚಟುವಟಿಕೆಗಳಿಗಾಗಿ ಈ ಯೋಜನೆಯಡಿ ಸದಸ್ಯ ಸಾಲ ಸಂಸ್ಥೆಗಳು ಅಂದರೆ, ಬ್ಯಾಂಕ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಇತರ ಹಣಕಾಸು ಮಧ್ಯವರ್ತಿಗಳಿಂದ ಸಾಲವನ್ನು ಒದಗಿಸಲಾಗುತ್ತದೆ.
ಈ ಯೋಜನೆ ಅತಿಸಣ್ಣ ಉದ್ಯಮಗಳಿಗೆ ಸುಲಭ ಮತ್ತು ತೊಂದರೆ ಮುಕ್ತ ಸಾಲ ಪಡೆಯಲು ಅವಕಾಶವನ್ನು ನೀಡುತ್ತದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಯುವ ಉದ್ಯಮಿಗಳಿಗೆ ತಮ್ಮ ವ್ಯವಹಾರ ಸ್ಥಾಪನೆ ಮಾಡಲು ಸಹಾಯಕವಾಗಿದೆ.
ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ಮುದ್ರಾ ಯೋಜನೆ ಆರಂಭವಾದ ಬಳಿಕ 24/3/2023ರಂತೆ, 40.82 ಕೋಟಿ ಸಾಲ ಖಾತೆಗಳಿಗೆ ಸುಮಾರು 23.2 ಲಕ್ಷ ಕೋಟಿ ಮಂಜೂರು ಮಾಡಲಾಗಿದೆ. ಯೋಜನೆಯಡಿಯಲ್ಲಿ ಶೇ 68 ಖಾತೆಗಳು ಮಹಿಳಾ ಉದ್ಯಮಿಗಳಿಗೆ ಮತ್ತು ಶೇ 51ರಷ್ಟು ಖಾತೆಗಳು ಎಸ್‌ಸಿ/ ಎಸ್‌ಟಿ ಮತ್ತು ಒಬಿಸಿ ವರ್ಗಗಳ ಉದ್ಯಮಿಗಳಿಗೆ ಸೇರಿದೆ.
ಈ ಯೋಜನೆಯಡಿ ಹಣಕಾಸಿನ ಅಗತ್ಯತೆ ಮತ್ತು ವ್ಯವಹಾರದ ಹಂತ ಆಧರಿಸಿ ಸಾಲಗಳನ್ನು 3 ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಅವುಗಳಲ್ಲಿ 50,000 ರೂ. ವರೆಗಿನ ಸಾಲ, 50,000 ರೂ. ನಿಂದ 5 ಲಕ್ಷದವರೆಗಿನ ಸಾಲ ಮತ್ತು 5 ಲಕ್ಷಕ್ಕಿಂತ ಹೆಚ್ಚಿನ ಮತ್ತು 10 ಲಕ್ಷದವರೆಗಿನ ಸಾಲಗಳು ಸೇರಿವೆ.
ಯೋಜನೆ ಅನ್ವಯ ಕೋಳಿ ಸಾಕಣೆ, ಡೈರಿ, ಜೇನುಸಾಕಣೆ, ಇತ್ಯಾದಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಒಳಗೊಂಡಂತೆ ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಉತ್ಪಾದಿಸುವ ಚಟುವಟಿಕೆಗಳಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲಾಗುತ್ತಿದೆ.












Click it and Unblock the Notifications