Tokay gecko: ಅಳಿವಿನಂಚಿನಲ್ಲಿರುವ ಟೋಕೇ ಗೆಕ್ಕೊ ಹಲ್ಲಿ ರಕ್ಷಿಸಿದ BSF ಸಿಬ್ಬಂದಿ
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಉತ್ತರ ಬಂಗಾಳ ಗಡಿನಾಡಿನ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಉತ್ತರ ಆಗ್ರಾದ ಗಡಿ ಗ್ರಾಮದಿಂದ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಹಲ್ಲಿ ಟೋಕೇ ಗೆಕ್ಕೊವನ್ನು (Tokay gecko) ರಕ್ಷಣೆ ಮಾಡಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ರಾಯಗಂಜ್ ಸೆಕ್ಟರ್‌ನ 79 ಬೆಟಾಲಿಯನ್ ಬಿಎಸ್‌ಎಫ್‌ನ ಪಡೆಗಳು ಜೂನ್ 26ರಂದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಇದರ ಪರಿಣಾಮವಾಗಿ ಸುಮಾರು 10 ಇಂಚುಗಳಷ್ಟು ಉದ್ದದ ಟೋಕೇ ಗೆಕ್ಕೊ ಪತ್ತೆಯಾಗಿದ್ದು, ಪೆಟ್ಟಿಗೆಯೊಳಗೆ ಅಡಗಿಸಿಟ್ಟು ಗಡಿ ಬೇಲಿಯ ಬಳಿ ಯಾರೂ ನೋಡದಂತೆ ಬಿಡಲಾಗಿತ್ತು. ಈ ಟೋಕೇ ಗೆಕ್ಕೊ ಚೇತರಿಸಿಕೊಂಡ ನಂತರ ರಕ್ಷಿಸಲಾದ ಸರೀಸೃಪವನ್ನು ಹೆಚ್ಚಿನ ಆರೈಕೆ ಮತ್ತು ಕಾನೂನು ಕ್ರಮಗಳಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣವೇ ಹಸ್ತಾಂತರಿಸಲಾಗಿದೆ.

ಟೋಕೇ ಗೆಕ್ಕೊ (ಗೆಕ್ಕೊ ಗೆಕ್ಕೊ) ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಪಟ್ಟಿ ಮಾಡಲಾದ ಅತ್ಯುನ್ನತ ಸಂರಕ್ಷಿತ ಜಾತಿಯ ಜೀವಿಗಳಲ್ಲಿ ಒಂದಾಗಿದೆ. ಇದು ತನ್ನ ರೋಮಾಂಚಕ ಬಣ್ಣ, ರಾತ್ರಿಯ ವೇಳೆಯ ಚಲನೆಯಿಂದ ಹೆಸರುವಾಸಿಯಾಗಿದೆ. ಅಲ್ಲದೆ ಏಷ್ಯಾದ ಕೆಲವು ಭಾಗಗಳಲ್ಲಿ ಮೂಢನಂಬಿಕೆಗಳು ಮತ್ತು ಸಾಬೀತಾಗದ ಔಷಧೀಯ ಉಪಯೋಗಗಳಿಂದಾಗಿ ಅಕ್ರಮ ವನ್ಯಜೀವಿ ವ್ಯಾಪಾರದಲ್ಲಿ ಹೆಚ್ಚಿನ ಮೌಲ್ಯಕ್ಕೂ ಹೆಸರುವಾಸಿಯಾಗಿದೆ.
ಬಿಎಸ್‌ಎಫ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಉತ್ತರ ಬಂಗಾಳ ಮತ್ತು ಪಕ್ಕದ ಗಡಿಗಳು ಅಕ್ರಮ ವನ್ಯಜೀವಿ ಕಳ್ಳಸಾಗಣೆಗಾಗಿ ಸೂಕ್ಷ್ಮ ವಲಯಗಳಾಗಿ ಹೊರಹೊಮ್ಮಿವೆ. ಜನವರಿ 2024ರಿಂದ ಮೇ2025 ರವರೆಗೆ ಬಿಎಸ್‌ಎಫ್ ಪಡೆಗಳು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಒಳಗೊಂಡ ವಿವಿಧ ಕಾರ್ಯಾಚರಣೆಗಳನ್ನು ನಡೆಸಿ ಈ ಅಕ್ರಮಗಳ ಪ್ರಯತ್ನಗಳನ್ನು ತಡೆದಿವೆ. ಈ ವೇಳೆ 400ಕ್ಕೂ ಹೆಚ್ಚು ಆಮೆಗಳು, 200 ಸ್ಯಾಂಡ್ ಬೋವಾ ಹಾವುಗಳು, 279 ಪಾರಿವಾಳಗಳು, 186 ವಿಲಕ್ಷಣ ಪಕ್ಷಿಗಳು ಮತ್ತು ಚಿರತೆ ಮರಿಯನ್ನು ವಶಪಡಿಸಿಕೊಳ್ಳುವಲ್ಲಿ ಬಿಎಸ್‌ಎಫ್ ಯಶಸ್ವಿಯಾಗಿದೆ.
ಈ ಅಪರೂಪದ ಗೆಕ್ಕೊವನ್ನು ಯಶಸ್ವಿಯಾಗಿ ತಡೆಹಿಡಿದು ರಕ್ಷಿಸಿರುವುದು ಬಿಎಸ್‌ಎಫ್‌ನ ಬದ್ಧತೆಯನ್ನು ಒತ್ತಿಹೇಳುತ್ತದೆ. ಭಾರತದ ಗಡಿಗಳನ್ನು ಅಕ್ರಮ ಒಳನುಸುಳುವಿಕೆ ಮತ್ತು ಕಳ್ಳಸಾಗಣೆಯಿಂದ ರಕ್ಷಿಸುವುದು ಮಾತ್ರವಲ್ಲದೆ ದೇಶದ ಪರಿಸರ ಪರಂಪರೆಯನ್ನು ಸಂರಕ್ಷಿಸುವುದು ಕೂಡ ಜವಾಬ್ದಾರಿ ಎಂದು ಬಿಎಸ್‌ಎಫ್ ಹೇಳಿದೆ. ಗಡಿ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ಜಾಗರೂಕರಾಗಿರಬೇಕು ಮತ್ತು ವನ್ಯಜೀವಿಗಳನ್ನು ಒಳಗೊಂಡ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಹತ್ತಿರದ ಬಿಎಸ್‌ಎಫ್ ಪೋಸ್ಟ್ ಅಥವಾ ಅರಣ್ಯ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಬಿಎಸ್‌ಎಫ್ ಕೋರಿದೆ.
ಮಾಹಿತಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್)












Click it and Unblock the Notifications