ಬ್ರಾಹ್ಮಣರ ವಿರುದ್ಧ ಹೇಳಿಕೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ದೂರು
ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯದಲ್ಲಿ ಎಚ್‌ಡಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು, ಈಗ ಮತ್ತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಆರಂಭವಾಗಿದೆ.
ಭೋಪಾಲ್, ಫೆಬ್ರವರಿ. 09: ರಾಜ್ಯದಲ್ಲಿ ಬ್ರಾಹ್ಮಣರ ಸಿಎಂ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕರು, ಬ್ರಾಹ್ಮಣ ಸಮುದಾಯದವರು ತಿರುಗಿ ಬಿದ್ದಿದ್ದಾರೆ. ಇದೇ ವೇಳೆ ರಾಷ್ಟ್ರ ಮಟ್ಟದಲ್ಲಿಯೂ ಒಂದು ಹೊಸ ವಿವಾದ ಆರಂಭವಾಗಿದೆ.
ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ದೇಶದ ಹಲವೆಡೆ ಆಕ್ರೋಶ ಉಂಟಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಕೀಲರ ಗುಂಪು ಗ್ವಾಲಿಯರ್‌ನ ಇಂದರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ.

"ಜಾತಿ ಪ್ರತ್ಯೇಕತೆಯ ಮೂಲಕ ಧಾರ್ಮಿಕ ಅಸಹಿಷ್ಣುತೆಯನ್ನು ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ" ಎಂದು ಆರೋಪಿಸಿ, ವಕೀಲರಾದ ಮಯಾಂಕ್ ಪಾಠಕ್, ಅಂಕಿತ್ ವಶಿಷ್ಠ್ ಮತ್ತು ನೀರಜ್ ಭಾರ್ಗವ ದೂರು ನೀಡಿದ್ದಾರೆ. IPC ಯ 153 (A) (B), 295 ಮತ್ತು 505 ಸೆಕ್ಷನ್‌ಗಳ ಅಡಿಯಲ್ಲಿ ಮೋಹನ್ ಭಾಗವತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದಿದ್ದಾರೆ.
ಈ ಬಗ್ಗೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರ ಮಯಾಂಕ್ ಪಾಠಕ್, "ಮೋಹನ್ ಭಾಗವತ್ ಜಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ, ದೇವರಲ್ಲ ಎಂದಿದ್ದಾರೆ. ಇದು ಬ್ರಾಹ್ಮಣ ಸಮುದಾಯ ಅಪಮಾನವಾಗಿದ್ದು, ಈ ಪದಗಳು ಧಾರ್ಮಿಕ ಅಸಹಿಷ್ಣುತೆ ಮತ್ತು ಜಾತಿ ಪ್ರತ್ಯೇಕತೆಯನ್ನು ಹರಡುವ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನವಾಗಿದೆ" ಎಂದಿದ್ದಾರೆ.
ಅವರ ಮೇಲೆ ಐಪಿಸಿ ಸೆಕ್ಷನ್ 153 (ಎ), (ಬಿ) 295 ಮತ್ತು 505 ರ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ದೂರು ನೀಡಿದ್ದೇವೆ. ರಾಜಕೀಯ ಲಾಭ ಪಡೆಯಲು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡಿರುವುದರಿಂದ ಎಫ್‌ಐಆರ್ ದಾಖಲಿಸಬೇಕು. ರಾಜಕೀಯ ಲಾಭ ಪಡೆಯಲು ಜಾತಿ ಪ್ರತ್ಯೇಕತೆಯ ಪ್ರಯತ್ನವು ಅನಾರೋಗ್ಯ ಮತ್ತು ಕೀಳು ಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಫೆಬ್ರವರಿ 5 ರಂದು ಮುಂಬೈನಲ್ಲಿ ನಡೆದ ಸಂತ ರವಿದಾಸ್ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಸ್ಪಷ್ಟಿಕರಣ ನೀಡಲಾಗಿದೆ.
ಸ್ಪಷ್ಟಿಕರಣದ ಹೊರತಾಗಿಯೂ ಬ್ರಾಹ್ಮಣ ಸಮುದಾಯದ ಒಂದು ಗುಂಪು ಗ್ವಾಲಿಯರ್‌ನಲ್ಲಿ ಮೋಹನ್ ಭಾಗವತ್ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಆರ್‌ಎಸ್‌ಎಸ್ ಮುಖ್ಯಸ್ಥರ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಭಾಗವತ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಇನ್ನು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಬಿಹಾರದ ನ್ಯಾಯಾಲಯದಲ್ಲಿ ಮೋಹನ್ ಭಾಗವತ್ ವಿರುದ್ಧ ದೂರು ದಾಖಲಿಸಿದ್ದಾರೆ.












Click it and Unblock the Notifications