ಟೆರೇಸ್‌ನಲ್ಲಿ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು!
ಹೈದರಾಬಾದ್ ಜನವರಿ 13: ಹನ್ನೊಂದು ವರ್ಷದ ಬಾಲಕ ಟೆರೇಸ್‌ನಲ್ಲಿ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಕರ ಸಂಕ್ರಾಂತಿ ಬೆನ್ನಲ್ಲೆ ಗಾಳಿಪಟ ಹಾರಿಸಲು ಸ್ನೇಹಿತರೊಂದಿಗೆ ಟೆರೇಸ್ ಮೇಲೋದ ಬಾಲಕನಿಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ.
ಹೈದರಾಬಾದ್‌ನಲ್ಲಿ ಶುಕ್ರವಾರ (ಜನವರಿ 12) ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ತನಿಷ್ಕ್ ಪ್ರಾಣಬಿಟ್ಟಿದ್ದಾರೆ. ಅತ್ತಾಪುರದ ಲಕ್ಷ್ಮಿ ವಾಣಿ ಅಪಾರ್ಟ್‌ಮೆಂಟ್ನಲ್ಲಿ ಈ ಘಟನೆ ನಡೆದಿದೆ.

ತನಿಷ್ಕ್ ತನ್ನ 15 ವರ್ಷದ ಸೋದರಸಂಬಂಧಿ ಮೋಹಿತ್ ಜೊತೆ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಗುಲಿದೆ. ಜನವರಿ 12 ರಂದು ಮಧ್ಯಾಹ್ನ 3.15 ರ ಸುಮಾರಿಗೆ ಈ ಘಟನೆ ನಡೆದಿದೆ.
ಬಾಲಕ ತನಿಷ್ಕ್ ತನ್ನ ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟೆರೇಸ್ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ ಎಂದು ಚಿಕ್ಕಪ್ಪ ಅಭಿಷೇಕ್ ಉಬಾಳೆ ಅತ್ತಾಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮಿ ವಾಣಿ ಟವರ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆಂದು ಅಭಿಷೇಕ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಲಕ್ಷ್ಮಿ ವಾಣಿ ಟವರ್ಸ್ ಆಡಳಿತ ಮಂಡಳಿ ಸಿಬ್ಬಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಗಿದ್ದೇನು?
ಲಕ್ಷ್ಮಿ ವಾಣಿ ಟವರ್ಸ್‌ನ ಕಟ್ಟಡವೊಂದರಲ್ಲಿ ವಾಸಿಸುತ್ತಿರುವ ತನಿಷ್ಕ್ ಅವರ ಸೋದರಸಂಬಂಧಿ ಮೋಹಿತ್ ಅಲ್ಲಿ ಗಾಳಿಪಟ ಹಾರಿಸುತ್ತಿದ್ದನು. ಮೋಹಿತ್‌ನೊಂದಿಗೆ ತನಿಷ್ಕ್ ಮತ್ತು ಸ್ನೇಹಿತರು ಸೇರಿಕೊಂಡರು. ಕೆಲವು ಮೆಟಾಲಿಕ್ ರಾಡ್‌ಗಳಿಗೆ ವಿದ್ಯುತ್ ತಂತಿ ತಗುಲಿತ್ತು. ಅಂತಹ ರಾಡ್ ಅನ್ನು ಸ್ಪರ್ಶಿಸಿದ ತನಿಷ್ಕ್ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈಜುಕೊಳದಲ್ಲಿ ಬಾಲಕಿ ಶವ
2023 ಡಿಸೆಂಬರ್ 28ರಂದು ಆಟವಾಡಲು ಹೊರಗೆ ಹೋಗಿದ್ದ ಮಾನ್ಯ ಎಂಬ 10 ವರ್ಷದ ಬಾಲಕಿ ಬೆಂಗಳೂರಿನ ವಸತಿ ಅಪಾರ್ಟ್ಮೆಂಟ್ ಸಂಕೀರ್ಣದ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ಆಕೆ ಮುಳುಗಿ ಸಾವನ್ನಪ್ಪಿದ್ದಾಳೆಂದು ನಂಬಲಾಗಿದ್ದರೂ, ಆಕೆಯ ಕುಟುಂಬದವರು ಆಕೆ ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದರು.
2019 ರಲ್ಲಿ ಹೈದರಾಬಾದ್‌ನ ರಾಯದುರ್ಗಂನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಲಿಫ್ಟ್ ಶಾಫ್ಟ್‌ಗೆ ಬಿದ್ದು ಸಾವನ್ನಪ್ಪಿದ್ದ. ಕಟ್ಟಡದ ಮೂರನೇ ಮಹಡಿಯಲ್ಲಿ ತನ್ನ ಸಹೋದರಿಯೊಂದಿಗೆ ಆಟವಾಡುತ್ತಿದ್ದ ಆತ ಲಿಫ್ಟ್ ನ ಗ್ರಿಲ್ ತೆರೆದು ಕೆಳಗೆ ನೋಡಿದ್ದಾನೆ. ಮೇಲಿಂದ ಬರುತ್ತಿದ್ದ ಲಿಫ್ಟ್ ಅವನಿಗೆ ಡಿಕ್ಕಿ ಹೊಡೆದು, ಲಿಫ್ಟ್ ಶಾಫ್ಟ್ ಕೆಳಗೆ ಬಿದ್ದು ನಜ್ಜುಗುಜ್ಜಾಗಿದೆ. ಅದೇ ವರ್ಷ ಹೈದರಾಬಾದ್‌ನಲ್ಲಿ ಆರು ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದ ಸಿಮೆಂಟ್ ಬೆಂಚಿನ ಮೇಲೆ ಉರುಳಿ ಬಿದ್ದು ಸಾವನ್ನಪ್ಪಿದ್ದ.












Click it and Unblock the Notifications