ಸ್ಟೇಡಿಯಂ ಉದ್ಘಾಟನೆ ವೇಳೆ ಕ್ರಿಕೆಟ್ ಪಂದ್ಯ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೊಡೆದ ಚೆಂಡು ತಗುಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತ
ರೇವಾ ಜಿಲ್ಲೆಯ ಇಟೌರಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣವನ್ನು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟಿಸಿದ್ದಾರೆ.
ಭೋಪಾಲ್, ಫೆಬ್ರವರಿ. 16: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಆಟದ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೊಡೆದ ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ವಿಕಾಸ್ ಮಿಶ್ರಾ ಗಾಯಗೊಂಡಿದ್ದಾರೆ. ವಿಕಾಸ್ ಮಿಶ್ರಾ ಹಣೆಗೆ ಚೆಂಡು ತಾಗಿದ್ದು, ರಕ್ತ ಸುರಿಯುತ್ತಿದ್ದ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ರೇವಾ ಜಿಲ್ಲೆಯ ಇಟೌರಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣವನ್ನು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟಿಸಿದ್ದರು. ಕ್ರೀಡಾಂಗಣ ಉದ್ಘಾಟನೆಗೊಂಡ ನಂತರ ಸೌಹಾರ್ದ ಪಂದ್ಯವನ್ನು ಆಯೋಜಿಸಲಾಗಿತ್ತು, ಜ್ಯೋತಿರಾದಿತ್ಯ ಸಿಂಧಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಬಿಜೆಪಿ ಕಾರ್ಯಕರ್ತನಿಗೆ ಬಡಿದಿತ್ತು.

ವಿಕಾಸ್ ಮಿಶ್ರಾ ಗಾಯಗೊಂಡ ತಕ್ಷಣ ಆಟವನ್ನು ಅರ್ಧಕ್ಕೆ ನಿಲ್ಲಿಸಿ, ಅವರನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾಜಿ ಸಚಿವ ರಾಜೇಂದ್ರ ಶುಕ್ಲಾ ಮತ್ತು ರೇವಾ ಸಂಸದ ಜನಾರ್ದನ್ ಮಿಶ್ರಾ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ಉದ್ಘಾಟನೆಯ ಜೊತೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೊತೆಗೆ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಸುಮಾರು 240 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶಂಕುಸ್ಥಾಪನಾ ಸಮಾರಂಭದಲ್ಲಿ ವಿಂಧ್ಯ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ಘೋಷಿಸಿದ್ದಾರೆ. ಈ ವಿಂಧ್ಯ ಎಕ್ಸ್‌ಪ್ರೆಸ್‌ವೇ ರಾಜ್ಯದ ರಾಜಧಾನಿ ಭೋಪಾಲ್‌ಗೆ ಸುಮಾರು 660 ಕಿಲೋಮೀಟರ್ ದೂರದ ಸಿಂಗ್ರೌಲಿಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಅದರ ಸುತ್ತಲೂ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಲಾಗಿದೆ.












Click it and Unblock the Notifications