Delhi Assembly Election 2025: ದೆಹಲಿ ಚುನಾವಣೆ ಕೇಜ್ರಿವಾಲ್, ಅಮಿತ್ ಶಾ ಮಾತಿನ ಸಮರ
ನವದೆಹಲಿ, ಜನವರಿ 12: ದೆಹಲಿ ವಿಧಾನಸಭೆ ಚುನಾವಣೆ-2025ರ ಅಧಿಸೂಚನೆ ಪ್ರಕಟವಾಗಿದೆ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ, ಎಎಪಿ ನಾಯಕರ ಮಾತಿನ ಸಮರ ಜೋರಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.
ದೆಹಲಿಯ ಮಾಜಿ ಸಿಎಂ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಭಾನುವಾರ ಮಾತನಾಡಿದ ಅವರು, "ಫೆಬ್ರವರಿ 5ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ದೆಹಲಿಯಲ್ಲಿರುವ ಸ್ಲಂಗಳನ್ನು ತೆರವುಗೊಳಿಸಲಿದೆ" ಎಂದು ಆರೋಪ ಮಾಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಶೀಶ್ ಮಹಲ್ (ದೆಹಲಿ ಮುಖ್ಯಮಂತ್ರಿಗಳ ನಿವಾಸ) ನಲ್ಲಿನ ಶೌಚಾಲಯ ನವೀಕರಣದ ಕುರಿತು ಆರೋಪ ಮಾಡಿದ್ದರು. ಇದರ ವೆಚ್ಚ ದೆಹಲಿಯ ಸ್ಲಂಗಳಿಗಿಂತ ಅಧಿಕ" ಎಂದು ಆರೋಪವನ್ನು ಮಾಡಿದ್ದರು. ಈ ಆರೋಪಕ್ಕೆ ಕೇಜ್ರಿವಾಲ್ ಭಾನುವಾರ ತಿರುಗೇಟು ನೀಡಿದ್ದಾರೆ.
ಕೀಟಗಳಂತೆ ನೋಡುತ್ತಾರೆ: "ಬಿಜೆಪಿ ಕಳೆದ ಐದು ವರ್ಷಗಳ ಕಾಲ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದೆ. ಕೊಳಗೇರಿ ಜನರನ್ನು ಅವರು ಕೀಟಗಳಂತೆ ನೋಡುತ್ತಾರೆ. ಅದು ಶ್ರೀಮಂತರ ಪಕ್ಷ" ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
"ಕೊಳಗೇರಿ ಪ್ರದೇಶದ ಭೂಮಿಯ ಮೇಲೆ ಬಿಜೆಪಿಯವರ ಕಣ್ಣು ಬಿದ್ದಿದೆ. ಅವರಿಗೆ ಸ್ಲಂ ಜನರ ಮತಗಳು ಬೇಕು. ಆದರೆ ಮತದಾನದ ಬಳಿಕ ಅವರ ಅಭಿವೃದ್ಧಿ ಬೇಕಾಗಿಲ್ಲ. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸ್ಲಂಗಳನ್ನು ನಾಶ ಪಡಿಸುತ್ತದೆ" ಎಂದು ಕೇಜ್ರಿವಾಲ್ ಹೇಳಿದರು.
"ಅಮಿತ್ ಶಾ ಅವರು ನನ್ನ ಬಗ್ಗೆ ಅತಿ ಕೆಟ್ಟದಾದ ಪದವನ್ನು ಬಳಕೆ ಮಾಡಿದ್ದಾರೆ. ಒಬ್ಬ ಕೇಂದ್ರ ಗೃಹ ಸಚಿವರಾಗಿ ಅವರಿಗೆ ಎಂತಹ ಪದ ಬಳಕೆ ಮಾಡಬೇಕು ಎಂಬ ಅರಿವಿಲ್ಲ. ಅವರು ಬಳಕೆ ಮಾಡಿದ ಪದ ನಾಗರಿಕ ಸಮಾಜದ ವ್ಯಕ್ತಿಯಾಗಿ ನಮಗೆ ಅಸಹನೆ ಹುಟ್ಟಿಸುತ್ತದೆ" ಎಂದು ಕೇಜ್ರಿವಾಲ್ ತಿಳಿಸಿದರು.
ಭಾನುವಾರ ಕೇಜ್ರಿವಾಲ್ ವಾಯುವ್ಯ ದೆಹಲಿಯ ಶಕುರ್ ಬಸ್ತಿ ಕ್ಷೇತ್ರದಲ್ಲಿ ರೈಲು ನಿಲ್ದಾಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದರು. ಬಿಜೆಪಿ, ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಮಾಡಿದರು.
ಈ ಕ್ಷೇತ್ರದ ಎಎಪಿ ಅಭ್ಯರ್ಥಿ ಸತ್ಯೇಂದ್ರ ಜೈನ್ ಸಹ ಕೇಜ್ರಿವಾಲ್ ಜೊತೆಗಿದ್ದರು. 2013, 2015, 2020ರ ಚುನಾವಣೆಯಲ್ಲಿ ಶಕುರ್ ಬಸ್ತಿ ಕ್ಷೇತ್ರದಲ್ಲಿ ಸತ್ಯೇಂದ್ರ ಜೈನ್ ಜಯಗಳಿಸಿದ್ದಾರೆ. 4ನೇ ಬಾರಿಯೂ ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಶನಿವಾರ ಮಾತನಾಡಿದ್ದ ಅಮಿತ್ ಶಾ, "ನಾವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದೆವು. ಅರವಿಂದ ಕೇಜ್ರಿವಾಲ್ ಶೌಚಾಲಯ ಕಟ್ಟಿಸಿ ಎಂದರು. 500 ವರ್ಷಗಳು ಕಾದ ಬಳಿಕ ನಾವು ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ದೇಶದ 3.58 ಜನರಿಗೆ ಮನೆ ನೀಡಿದ್ದಾರೆ. ಇದು ಪ್ರಧಾನಮಂತ್ರಿಗಳ ಗ್ಯಾರಂಟಿಯಾಗಿದೆ. ಕೊಳಗೇರಿಗಳಲ್ಲಿ ವಾಸಿಸುವ ಎಲ್ಲರಿಗೂ ಮನೆ ಸಿಗಬೇಕು ಎಂಬುದು ಮೋದಿ ಅವರ ದೂರದೃಷ್ಟಿಯಾಗಿದೆ. ಅರವಿಂದ ಕೇಜ್ರಿವಾಲ್ ಅವರ ಶೀಶ್ ಮಹಲ್‌ನಲ್ಲಿರುವ ಶೌಚಾಲಯ ಈ ಸ್ಲಂಗಳಿಗಿಂತ ದುಬಾರಿಯಾಗಿದೆ" ಎಂದು ಆರೋಪಿಸಿದ್ದರು.












Click it and Unblock the Notifications