Breaking: ಬಿಜೆಪಿಯಿಂದ ನೂಪುರ್ ಶರ್ಮಾ, ಜಿಂದಾಲ್ ಅಮಾನತು
ಲಕ್ನೋ ಜೂನ್ 5: ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯ ಚರ್ಚೆ ಒಂದರಲ್ಲಿ ಪ್ರವಾದಿ ಮಹೊಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಈ ಘಟನೆಯ ನಂತರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಲಭೆ ನಡೆದಿದ್ದು, ಈ ಗಲಭೆಗೆ ಇವರ ಹೇಳಿಕೆಯೇ ಕಾರಣ ಎಂದು ಆರೋಪಿಸಲಾಗಿದೆ.
"ಯಾವುದೇ ಧರ್ಮವನ್ನು ಅವಹೇಳನ ಮಾಡುವ ಚಿಂತನೆಯನ್ನು ತಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುತ್ತದೆ. ಭಾರತೀಯ ಜನತಾ ಪಕ್ಷ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಧಾರ್ಮಿಕ ನಾಯಕರ ಅವಹೇಳನವನ್ನು ಬಿಜೆಪಿ ಖಂಡಿಸುತ್ತದೆ. ಈ ರೀತಿಯ ವ್ಯಕ್ತಿಗಳು ಅಥವಾ ಸಿದ್ದಾಂತವನ್ನು ಬಿಜೆಪಿ ಎಂದಿಗೂ ಪ್ರೋತ್ಸಾಹಿಸುವುದಿಲ್ಲ,'' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಭಾರತದಲ್ಲಿ ಸಾವಿರಾರು ವರ್ಷಗಳಿಂದ ಹಲವು ಧರ್ಮಗಳು ನೆಲೆಸಿವೆ. ಬಿಜೆಪಿ ಕೂಡಾ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಅಥವಾ ಸಿದ್ದಾಂತವನ್ನು ಬಿಜೆಪಿ ಖಂಡಿಸುತ್ತದೆ,'' ಎಂದರು.
"ಭಾರತದ ಸಂವಿಧಾನವು ದೇಶದ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಅನುಸರಿಸುವ ಹಾಗೂ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ನೀಡಿದೆ. ಎಲ್ಲ ಧರ್ಮಗಳನ್ನು ಬಿಜೆಪಿ ಗೌರವಿಸುತ್ತದೆ,'' ಎಂದು ಅರುಣ್ ಸಿಂಗ್ ಹೇಳಿದರು.

ಇನ್ನೊಂದೆಡೆ, ಅವಹೇಳನಕಾರಿ ಹೇಳಿಕೆ ಸಂಬಂಧ ರಝಾ ಅಕಾಡೆಮಿಯ ಮುಂಬೈ ಘಟಕದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರು ನೂಪುರ್ ಶರ್ಮಾ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶರ್ಮಾ ಹಾಗೂ ಜಿಂದಲ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಮೇಡ್ ಇನ್ ಇಂಡಿಯಾ ಸರಕುಗಳನ್ನು ನಿಷೇಧಿಸುವ ಕುರಿತು ಟ್ಟಿಟ್ಟರ್ ಅಭಿಯಾನ ನಡೆಯುತ್ತಿದೆ.
ವಿವಾದ ತೀವ್ರ ಸ್ವರೂಪ ಪಡೆಯುವ ಮೊದಲು ಬಿಜೆಪಿಯು ಈ ಇಬ್ಬರೂ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications