ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ನಾಲ್ಕು ಘಟವಾಣಿಯರು
ಬೆಂಗಳೂರು, ಜೂ. 25: ದೇಶದೆಲ್ಲೆಡೆ ದಿಗ್ವಿಜಯ ಸಾಧಿಸಿ ಮುನ್ನುಗುತ್ತಿದ್ದ ಬಿಜೆಪಿಗೆ ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಮಹಿಳೆಯರು ಮುಜುಗರ ತಂದಿದ್ದಾರೆ. ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಬೆನಲ್ಲೇ ವಿವಿಧ ವಿವಾದ ಮತ್ತು ಹಗರಣಗಳ ಕಗ್ಗಂಟು ಸುತ್ತಿಕೊಳ್ಳುತ್ತಿದೆ. ಎಲ್ಲದರಲ್ಲೂ ಮಹಿಳೆಯರ ಹೆಸರೇ ಕೇಳಿಬಂದಿರುವುದು ಮಾತ್ರ ಅರಗಿಸಿಕೊಳ್ಳಲೇಬೇಕಾದ ಸಂಗತಿ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಹಾರಾಷ್ಟ್ರ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಡೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವ ನಾರಿಯರು.[ಲಮೋ ಎಂದರೇನು? ರಾಜಕಾರಣಿಗಳು ಏಕೆ ಹೆದರುತ್ತಾರೆ?]
ಬಿಜೆಪಿ ನಾಯಕಿಯರ ನಡವಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ವಿರೊಧ ವ್ಯಕ್ತವಾಗಿದ್ದು ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಈ ಬಗ್ಗೆ ನರೇಂದ್ರ ಮೋದಿ ಸುಮ್ಮನಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಬಿಜೆಪಿಯ ಒಂದು ಕಾಲದ ಶಕ್ತಿ ದೇವತೆ ಇದೀಗ ಲಲಿತ್ ಮೋದಿ ವೀಸಾ ನೀಡಿಕೆ ವಿವಾದದ ಕೇಂದ್ರ ಬಿಂದು. ಹಗರಣದ ಆರೋಪವಿದ್ದ ಲಲಿತ್ ಮೋದಿಗೆ ಇಂಗ್ಲೆಂಡ್ ನಿಂದ ಪೋರ್ಚುಗಲ್ ಗೆ ತೆರಳಲು ಅವಕಾಶ ಮಾಡಿಕೊಟ್ಟ ಸಂಬಂಧ ಬರೆದ ಕೆಲ ಇ ಮೇಲ್ ಗಳು ಸುಷ್ಮಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.

ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ
ಲೋಕಸಭೆ ಚುನಾವಣೆ ನಂತರದಿಂದಲೂ ಸುದ್ದಿಯಲ್ಲಿದ್ದ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ನೀಡಿದ ತಮ್ಮ ಶೈಕ್ಷಣಿಕ ದಾಖಲೆಗಳಲ್ಲಿ ಕೆಲ ಸಂಗತಿ ಮುಚ್ಚಿಟ್ಟಿದ್ದಾರೆ. ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ. ಒಂದು ಕಡೆ ಎಂಎ ಎಂದು ನಮೂದು ಮಾಡಿದ್ದರೆ ಇನ್ನೊಂದೆಡೆ ಬಿಕಾಂ ಎಂದು ಹೇಳಿಕೊಂಡಿದ್ದರು ಎಂದು ಲೇಖಕ ಅಹ್ಮೀರ್ ಖಾನ್ ದೂರು ದಾಖಲಿಸಿದ್ದರು

ವಸುಂಧರಾ ರಾಜೆ
ಲಲಿತ್ ಮೋದಿ ವೀಸಾ ನೀಡಿಕೆ ಸಂಬಂಧ ಸಹಿ ನೀಡಿದ ಗುರುತರ ಆರೋಪ ರಾಜಸ್ಥಾನದ ಮುಖ್ಯಮಂತ್ರಿಗೆ ಕಂಟಕಪ್ರಾಯವಾಗಿದೆ. ಒಂದು ಕಾಲದಲ್ಲಿ ಬಿಜೆಪಿಯಿಂದ ಹೊರಕ್ಕೆ ಹೋಗುವ ಬೆದರಿಕೆಯನ್ನು ಒಡ್ಡಿದ್ದರು. ಮಧ್ಯ ಪ್ರವೇಶಿಸಿದ್ದ ನಿತಿನ್ ಗಡ್ಕರಿ ರಾಜೆ ಅವರನ್ನು ಮನವೊಲಿಸಿ ಬಿಜೆಪಿಯಲ್ಲೇ ಇರಿಸಿಕೊಳ್ಳಲು ಯಶಸ್ವಿಯಾಗಿದ್ದರು.

ಪಂಕಜಾ ಮುಂಡೆ
ಮಕ್ಕಳಿಗೆ ವಿತರಣೆಯಾಗಬೇಕಿದ್ದ ಆಹಾರದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಅವರ ವಿರುದ್ಧ 206 ಕೋಟಿ ರು. ಅವ್ಯವಹಾರದ ಆರೋಪ ಕೇಳಿ ಬಂದಿದೆ.

ವಸುಂಧರಾ ರಾಜೆನಾಮೆ?
ಆರೋಪಿ ಲಲಿತ್ ಮೋದಿಗೆ ಸಹಾಯ ಮಾಡಿದಕ್ಕೆ ಸಂಬಂಧಿಸಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಬಿಜೆಪಿ ವರಿಷ್ಠರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. 2011ರಲ್ಲಿ ಲಲಿತ್ ಮೋದಿ ಲಂಡನ್ ಕೋರ್ಟ್‌ಗೆ ಸಲ್ಲಿಸಿದ ವಲಸೆ ಪತ್ರಗಳಿಗೆ ನಾನು ಸಹಿ ಮಾಡಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೈ ಕಮಾಂಡ್ ಕಠಿಣ ಸಂದೇಶ
ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿ. ಇಲ್ಲವಾದಲ್ಲಿ 24 ಗಂಟೆ ಒಳಗಾಗಿ ನಿರಪರಾಧಿ ಎಂದು ಸಾಬೀತು ಪಡಿಸಿ ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಿ ಎಂದು ಬಿಜೆಪಿ ವರಿಷ್ಠರು ವಸುಂಧರಾ ಅವರಿಗೆ ಕಠಿಣ ಸಂದೇಶ ರವಾನೆ ಮಾಡಿದ್ದರು.

ಪಂಕಜಾ ತಪ್ಪು ಮಾಡಿಲ್ಲ
ಪಂಕಜಾ ಮುಂಡೆ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಳ್ಳಿಹಾಕಿದ್ದಾರೆ. ಪಂಕಜ ಅಂಥ ಯಾವುದೇ ಕೆಲಸ ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಇರಾನಿಗೆ ಶಾಕ್ ನೀಡಿದ ನ್ಯಾಯಾಲಯ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಗೆ ದೆಹಲಿ ನ್ಯಾಯಾಲಯ ಶಾಕ್ ನೀಡಿದೆ. ಚುನಾವಣೆ ನಾಮಪತ್ರದಲ್ಲಿ ತಪ್ಪು ಶೈಕ್ಷಣಿಕ ಮಾಹಿತಿ ನೀಡಿರುವ ಕುರಿತು ಸಲ್ಲಿಕೆಯಾಗಿರುವ ದೂರನ್ನು 'ವಿಚಾರಣಾ ಯೋಗ್ಯ' ಎಂದು ಪರಿಗಣಿಸಿರುವ ಕೋರ್ಟ್ ಆ. 28ಕ್ಕೆ ವಿಚಾರಣೆ ನಿಗದಿ ಪಡಿಸಿದೆ.

ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ರಾಜೀನಾಮೆ ನೀಡಲೇಬೇಕು. ಆಡಳಿತಾರೂಢ ಪಕ್ಷಕ್ಕೆ ಬೇರೆ ದಾರಿನೇ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಗುರುವಾರ ಪಟ್ಟು ಹಿಡಿದಿದೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಆಮ್ ಆದ್ಮಿ ಕಾರ್ಯಕರ್ತರ ಬಂಧನ
ಕೇಂದ್ರ ಮಾನವ ಸಂಪನ್ಮೂಲಗಳ ಖಾತೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗುರುವಾರ ಪ್ರತಿಭಟನೆಯಲ್ಲಿ ತೊಡಗಿದ್ದ 60 ಜನರನ್ನು ಬಂಧಿಸಲಾಗಿದೆ. ಸುಮಾರು 500 ಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತ ಮುನ್ನುಗ್ಗಲು ಮುಂದಾದವರನ್ನು ಬಂಧಿಸಲಾಗಿದೆ. ಇರಾನಿ 72 ಗಂಟೆ ಒಳಗೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯ ಮಾಡಿದೆ.












Click it and Unblock the Notifications