ಬಿಜೆಪಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಧಿ 2ನೇ ಬಾರಿ ವಿಸ್ತರಣೆ?
ನವದೆಹಲಿ, ಜೂನ್ 30: ಲೋಕಸಭೆ ಚುನಾವಣೆ 2024 ಮುಗಿದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಸಂಪುಟ 3.0ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರ್ಪಡೆಗೊಂಡಿದ್ದಾರೆ. ಅವರು ಈಗ ಕೇಂದ್ರ ಆರೋಗ್ಯ ಸಚಿವರು.
ಜೆಪಿ ನಡ್ಡಾ ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಂತೆಯೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಯಾರು? ಎಂಬ ಪ್ರಶ್ನೆ ಹುಟ್ಟಿತು. ಆದರೆ ಸದ್ಯದ ಮಾಹಿತಿ ಪ್ರಕಾರ ಜೆಪಿ ನಡ್ಡಾ 6 ತಿಂಗಳ ಅವಧಿಗೆ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಬಿಜೆಪಿ ನಿಯಮದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮೂರು ವರ್ಷಗಳು. 2024ರ ಜನವರಿಗೆ ಜೆಪಿ ನಡ್ಡಾ ಅವಧಿ ಅಂತ್ಯಗೊಂಡಿತ್ತು. ಆದರೆ ಲೋಕಸಭೆ ಚುನಾವಣೆ ಎದುರಾಗಲಿದ್ದ ಕಾರಣಕ್ಕೆ ಅವರ ಅಧಿಕಾರಾವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡಲಾಗಿತ್ತು.
2ನೇ ಅವಧಿಗೆ ವಿಸ್ತರಣೆ: ಜೂನ್ ಅಂತ್ಯಕ್ಕೆ ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಅದರಲ್ಲೂ ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ 2.0 ಸಂಪುಟದಲ್ಲಿದ್ದ ಯುವ ನಾಯಕರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಇತ್ತು.
ಆದರೆ ಸದ್ಯ ಪಕ್ಷದ ಮೂಲದ ಮಾಹಿತಿ ಪ್ರಕಾರ ಜೆಪಿ ನಡ್ಡಾ ಅವರ ಅವಧಿ 6 ತಿಂಗಳು 2ನೇ ಬಾರಿಗೆ ವಿಸ್ತರಣೆಯಾಗಲಿದೆ. ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ಪಕ್ಷ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ.
ನವೆಂಬರ್ ವೇಳೆಗೆ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು & ಕಾಶ್ಮೀರದ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳಬೇಕಿದೆ. ಆದ್ದರಿಂದ ಚುನಾವಣೆ ಎದುರಿರುವಾಗ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡದೇ ಜೆಪಿ ನಡ್ಡಾ ಅವಧಿ ವಿಸ್ತರಣೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ, ಜೆಪಿ ನಡ್ಡಾ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಿ ಪಕ್ಷ ಮತ್ತೆ ಅಧಿಕಾರ ಪಡೆದಿರುವುದು, ವಿವಿಧ ರಾಜ್ಯಗಳ ಬಿಜೆಪಿ ಘಟಕದ ಚುನಾವಣೆ ಇನ್ನೂ ಬಾಕಿ ಇರುವ ಕಾರಣ ಜೆಪಿ ನಡ್ಡಾ ಅಧಿಕಾರಾವಧಿ ವಿಸ್ತರಣೆ ಮಾಡಲು ಹಿರಿಯ ನಾಯಕರು ಒಪ್ಪಿಗೆ ಕೊಟ್ಟಿದ್ದಾರೆ.
ಹೊಸ ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡಲು ರಾಜ್ಯ, ಕೇಂದ್ರ ಮಟ್ಟದಲ್ಲಿ ಹಲವು ಪ್ರಕ್ರಿಯೆಗಳಿವೆ. ಆದ್ದರಿಂದ ವಿವಿಧ ರಾಜ್ಯ ಘಟಕಗಳ ಪಕ್ಷದ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಬಳಿಕ ರಾಷ್ಟ್ರೀಯ ಮಟ್ಟದಲ್ಲಿನ ಬದಲಾವಣೆ ಪ್ರಾರಂಭಿಸುವ ನಿರೀಕ್ಷೆ ಇದೆ.
ಸದ್ಯದ ಮಾಹಿತಿ ಪ್ರಕಾರ ದಲಿತ, ಒಬಿಸಿ ಅಥವ ಮಹಿಳಾ ನಾಯಕಿಯನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಆದರೆ ಯಾರು ಅಧ್ಯಕ್ಷರಾಗಬಹುದು? ಎಂಬ ಗುಟ್ಟನ್ನು ಪಕ್ಷದ ನಾಯಕರು ಬಿಟ್ಟುಕೊಟ್ಟಿಲ್ಲ.
ಮೂರು ವರ್ಷಗಳ ಕಾಲ ಜೆಪಿ ನಡ್ಡಾ ಸಕ್ರಿಯವಾಗಿಯೇ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ. ಆದರೆ ಮೈತ್ರಿಕೂಟ ಪಕ್ಷಗಳ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಈಶಾನ್ಯ ರಾಜ್ಯಗಳಲ್ಲಿ, ಉತ್ತರ ಭಾರತದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಜೆಪಿ ನಡ್ಡಾ ತಂತ್ರಗಾರಿಕೆ ಕೆಲಸ ಮಾಡಿದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.












Click it and Unblock the Notifications