Maharashtra Election 2024: ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು, ಅಮಿತ್ ಶಾ ಎಂಟ್ರಿ
ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾದರೂ ಸಹ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ರಾಜ್ಯ ಬಿಜೆಪಿ ಘಟಕ ಸಿಎಂ ಆಯ್ಕೆ ಬಗ್ಗೆ ಸುಳಿವೊಂದನ್ನು ನೀಡಿದೆ. ಈಗ ಆಗಿರುವ ಗೊಂದಲಗಳಿಗೆ ಶಿವಸೇನೆಯೇ ಕಾರಣ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ. ಮಂಗಳವಾರ ವಿಧಾನಸಭೆ ಅವಧಿ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಹೊಸ ಸರ್ಕಾರ ರಚಿಸಲಿದೆ. ಮಹಾಯತಿ ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿದ್ದು, ಒಟ್ಟು ಶಾಸಕರ ಬಲ 230.

ರಾಜ್ಯಪಾಲ ಸಿ. ಪಿ. ರಾಧಾಕೃಷ್ಣ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡುವಂತೆಯೂ ಸೂಚನೆಯನ್ನು ನೀಡಿದ್ದಾರೆ. ಆದರೆ ಹೊಸ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ.
ಶಿವಸೇನೆಯ ಹಠ: ರಾಜ್ಯದ ಬಿಜೆಪಿ ನಾಯಕರು ಹೇಳುವಂತೆ ಶಿವಸೇನೆ ಏಕನಾಥ್ ಶಿಂಧೆ ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಆದರೆ ಮಹಾರಾಷ್ಟ್ರದ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಭೆ ನಡೆಸಿದ್ದಾರೆ. ಎರಡು ದಿನದಲ್ಲಿ ಅಂತಿಮ ಚಿತ್ರಣ ಸಿಗುವ ನಿರೀಕ್ಷೆ ಇದೆ. ಮಹಾರಾಷ್ಟ್ರದ ಬಿಜೆಪಿ ನಾಯಕರು ಮೊದಲು ಖಾತೆ ಹಂಚಿಕೆ ಅಂತಿಮಗೊಳಿಸಿ, ಬಳಿಕ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ ಎಂದು ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ 43 ಸಚಿವ ಸ್ಥಾನಗಳಿವೆ. ಮಹಾಯತಿ ಮೈತ್ರಿಕೂಟದ ಹೊಸ ಸರ್ಕಾರದಲ್ಲಿ 57 ಸೀಟು ಹೊಂದಿರು ಶಿವಸೇನೆ (ಏಕನಾಥ್ ಶಿಂಧೆ ಬಣ), 41 ಸೀಟು ಹೊಂದಿರುವ ಎನ್‌ಸಿಪಿ (ಅಜಿತ್ ಪವಾರ್ ಬಣ)ಕ್ಕೆ ಕೆಲವು ಸಚಿವ ಸ್ಥಾನ ನೀಡಬೇಕು. ಮತ್ತೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಬಿಜೆಪಿ ವರಿಷ್ಠ ನಾಯಕರು ಒಪ್ಪಿಗೆ ಕೊಟ್ಟಿಲ್ಲ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲು ಆರ್‌ಎಸ್‌ಎಸ್ ಮತ್ತು ರಾಜ್ಯ ಬಿಜೆಪಿ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಏಕನಾಥ್ ಶಿಂಧೆಯನ್ನು ಎರಡು ವರ್ಷ ಮುಂದುವರೆಸಲು ಆರ್‌ಎಸ್‌ಎಸ್, ರಾಜ್ಯ ಬಿಜೆಪಿ ನಾಯಕರು ಒಪ್ಪಿಲ್ಲ. ಈ ಕುರಿತು ಹೈಕಮಾಂಡ್ ನಾಯಕರಿಗೆ ಸ್ಪಷ್ಟವಾದ ಸಂದೇಶವನ್ನು ಸಹ ರವಾನೆ ಮಾಡಲಾಗಿದೆ. ಚುನಾವಣಾ ಪ್ರಚಾರವನ್ನು ಮುನ್ನಡೆಸಿದ್ದು, ಏಕನಾಥ್ ಶಿಂಧೆ ಆದ್ದರಿಂದ ಅವರಿಗೆ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಶಿವಸೇನೆ ಬೇಡಿಕೆ. ಆದರೆ 145 ಮ್ಯಾಜಿಕ್ ನಂಬರ್ ಪೈಕಿ 132 ಸ್ಥಾನ ಗೆದ್ದಿರುವ ಬಿಜೆಪಿ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿಲ್ಲ.
ನವೆಂಬರ್ 23ರ ಶನಿವಾರ ಚುನಾವಣಾ ಫಲಿತಾಂಶ ಘೋಷಣೆ ಆಗಿದೆ. ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಂಗಳವಾರವೂ ಒಮ್ಮತ ಮೂಡದ ಕಾರಣ ಹೊಸ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗಿದೆ. ಬಿಜೆಪಿ ವರಿಷ್ಠರು ಎರಡು ದಿನದಲ್ಲಿ ಎಲ್ಲಾ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದಾರೆ.
ದೇವೇಂದ್ರ ಫಡ್ನವೀಸ್ ಸೋಮವಾರ ದೆಹಲಿಗೆ ಭೇಟಿ ನೀಡಬೇಕಿತ್ತು. ಆದರೆ ಹೈಕಮಾಂಡ್ ನಾಯಕರು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಬ್ಯುಸಿ ಇರುವ ಕಾರಣ ಅವರು ದೆಹಲಿ ಭೇಟಿ ಮುಂದಕ್ಕೆ ಹಾಕಿದ್ದಾರೆ. ದೇವೇಂದ್ರ ಫಡ್ನವೀಸ್ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ಬೇರೆ ನಾಯಕನ ಆಯ್ಕೆ ನಡೆಯಲಿದೆ ಎಂಬ ಸುದ್ದಿಯನ್ನು ರಾಜ್ಯ ಬಿಜೆಪಿ ಘಟಕ ತಳ್ಳಿ ಹಾಕಿದೆ.












Click it and Unblock the Notifications