ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ವೀರೇಂದ್ರ ಕುಮಾರ್
ನವದೆಹಲಿ, ಜೂನ್ 11: ಮಧ್ಯಪ್ರದೇಶದ ಸಂಸದ ವೀರೇಂದ್ರ ಕುಮಾರ್ ಅವರನ್ನು 17ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.
65 ವರ್ಷ ವಯಸ್ಸಿನ ಕುಮಾರ್ ಅವರು ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಮಧ್ಯಪ್ರದೇಶದ ತಿಕ್ಮಘರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮುಂಚೆ ಮೋದಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಲೋಕಸಭೆ ಮಧ್ಯಂತರ ಸ್ಪೀಕರ್ ಮನೇಕಾ ಗಾಂಧಿ?
ಲೋಕಸಭೆ ಚುನಾವಣೆ 2019ರಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೋದಿ ಸೇರಿದಂತೆ 58 ಮಂದಿ ಸಚಿವ ಸಂಪುಟದಲ್ಲಿದ್ದಾರೆ. ಆದರೆ, ಸ್ಪೀಕರ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮೋದಿ ಸರ್ಕಾರ್ 2.0ರಲ್ಲಿ ಸಚಿವ ಸ್ಥಾನ ಸಿಗದ ಕಾರಣ ಮನೇಕಾ ಗಾಂಧಿ ಅವರನ್ನು ಸ್ಪೀಕರ್ ಆಗಿ ನೇಮಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. 4 ಬಾರಿ ಸಾಗರ್ ಲೋಕಸಭೆ ಕ್ಷೇತ್ರ ಹಾಗೂ 3 ಬಾರಿ ತಿಕ್ಮಘರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ವೀರೇಂದ್ರ ಕುಮಾರ್ ಅವರು ಮೋದಿ ಸರ್ಕಾರದಲ್ಲಿ ಮಹಿಳಾ ಮತ್ತು ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಮನೇಕಾ ಗಾಂಧಿ ಅಲ್ಲದೆ, ಹಿರಿಯ ಬಿಜೆಪಿ ನಾಯಕ ಸಂತೋಷ್ ಗಂಗ್ವಾರ್ ಹೆಸರು ಕೂಡಾ ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದಿದೆ. ಪಕ್ಷಾತೀತವಾಗಿ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾದವರು, ನೂತನ ಸಂಸದರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ
17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಜೂನ್ 17 ರಿಂದ ಜುಲೈ 26ರ ತನಕ ನಡೆಯಲಿದೆ. ಮೊದಲ ಅಧಿವೇಶನದಲ್ಲಿ ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.