ಬಿಜೆಪಿ-ಜೆಜೆಪಿ ಮೈತ್ರಿ ಒಡಕು: ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ
ಚಂಡಿಗಢ, ಮಾರ್ಚ್ 12: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಜೆಜೆಪಿ ಮೈತ್ರಿಯಲ್ಲಿ ಒಡಕು ಉಂಟಾಗಿದೆ ಎಂಬ ಊಹಾಪೋಹಗಳ ನಡುವೆಯೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾರ್ಚ್ 12ರ ಮಂಗಳವಾರ ಬೆಳಗ್ಗೆ ರಾಜ್ಯಪಾಲ ಬಂಡಾರು ದತ್ತಾರೇಯ ಅವರನ್ನು ಭೇಟಿಯಾದ ನಂತರ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದಾರೆ. ಸಂಪೂರ್ಣ ಸಂಪುಟ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದೆ. ಎರಡು ಮೈತ್ರಿ ಪಕ್ಷಗಳು ಈಗ ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧೆ ಮಾಡಲಿವೆ.

ಮುಂಬರುವ ಚುನಾವಣೆಗೆ ದುಷ್ಯಂತ್ ಚೌತಾಲಾ ನೇತೃತ್ವದ ಪಕ್ಷಕ್ಕೆ 2 ಸ್ಥಾನಗಳನ್ನು ನೀಡಲು ಬಿಜೆಪಿ ಸಿದ್ಧವಿಲ್ಲ ಮತ್ತು ಎಲ್ಲಾ 10 ಸ್ಥಾನಗಳಲ್ಲಿ ಸ್ವಂತವಾಗಿ ಸ್ಪರ್ಧಿಸಲು ಬಯಸಿದೆ ಎಂದು ವರದಿಗಳು ತಿಳಿಸಿವೆ. ಹರಿಯಾಣದಲ್ಲಿ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಹರಿಯಾಣದ ಕುರುಕ್ಷೇತ್ರ ಕ್ಷೇತ್ರದ ಬಿಜೆಪಿ ಸಂಸದ ನಯಾಬ್ ಸಿಂಗ್ ಸೈನಿ ಅಥವಾ ಕರ್ನಾಲ್ ಸಂಸದ ಸಂಜಯ್ ಭಾಟಿಯಾ ಖಟ್ಟರ್ ಬದಲಿಗೆ ಮುಖ್ಯಮಂತ್ರಿಯಾಗಲು ಮುಂಚೂಣಿಯಲ್ಲಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ ಮನೋಹರ್ ಲಾಲ್ ಖಟ್ಟರ್ ಮತ್ತೆ ಸಿಎಂ ಆಗಲಿದ್ದಾರೆ.

ದುಷ್ಯಂತ್ ಚೌತಾಲಾ ಅವರ ಜೆಜೆಪಿ ಮತ್ತು ಬಿಜೆಪಿ ಎರಡೂ ಮುಂಬರುವ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸುವುದಾಗಿ ಹೇಳಿವೆ. 2019 ರಲ್ಲಿ, ಬಿಜೆಪಿ ರಾಜ್ಯದಲ್ಲಿ ಎಲ್ಲಾ 10 ಸ್ಥಾನಗಳನ್ನು ಗೆದ್ದಿತು. ದುಷ್ಯಂತ್ ಚೌತಾಲಾ ಅವರ ಪಕ್ಷವು ಎಲ್ಲಾ ಏಳು ಕಡೆ ಸೋತಿತು. ಆದರೆ 4.9 ಪ್ರತಿಶತದಷ್ಟು ಮತ ಪಾಲನ್ನು ಗಳಿಸಿತು.
ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಹರಿಯಾಣದ ವೀಕ್ಷಕರನ್ನಾಗಿ ನೇಮಿಸಲಾಗಿದೆ. ವೀಕ್ಷಕರು ಶಾಸಕರೊಂದಿಗೆ ಮಾತುಕತೆ ನಡೆಸಿದ ನಂತರ ನೂತನ ಮುಖ್ಯಮಂತ್ರಿಯನ್ನು ಘೋಷಿಸಲಾಗುವುದು ಎಂದು ವರದಿಯಾಗಿದೆ.
ಅಕ್ಟೋಬರ್ 2023 ರಲ್ಲಿ, ಒಬಿಸಿ ಸದಸ್ಯ ಮತ್ತು ಹರಿಯಾಣದ ಕುರುಕ್ಷೇತ್ರದ ಲೋಕಸಭಾ ಸಂಸದರಾದ ನಯಾಬ್ ಸಿಂಗ್ ಸೈನಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಓಂ ಪ್ರಕಾಶ್ ಧನಕರ್ ಅವರ ಬದಲಿಗೆ ಹೊಸ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ನಯಾಬ್ ಸಿಂಗ್ ಸೈನಿ ಅವರ ನೇಮಕವು ರಾಜ್ಯದಲ್ಲಿ ಒಬಿಸಿ ಸಮುದಾಯದೊಳಗೆ ಬಿಜೆಪಿಯ ಪ್ರಭಾವವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರಸ್ತುತ, 90 ಸದಸ್ಯರ ಸದನದಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, ಜೆಜೆಪಿ 10 ಹೊಂದಿದೆ. ಆಡಳಿತಾರೂಢ ಒಕ್ಕೂಟವು ಏಳು ಸ್ವತಂತ್ರರ ಪೈಕಿ ಆರು ಮಂದಿಯ ಬೆಂಬಲವನ್ನು ಸಹ ಹೊಂದಿದೆ.












Click it and Unblock the Notifications