ಬಿಜೆಪಿ ಹೈಕಮಾಂಡ್‌ನಿಂದ ಮತ್ತೆ ಅದೇ ನಾಯಕನಿಗೆ ಮಣೆ, ಕಾರಣ ಇಂಟ್ರಸ್ಟಿಂಗ್!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ, ಏಕಾಂಗಿಯಾಗಿ ಸರ್ಕಾರ ರಚಿಸಲು ಬೇಕಾದಷ್ಟು ಸ್ಥಾನಗಳಲ್ಲಿ ಗೆದ್ದಿರಲಿಲ್ಲ.
ಇನ್ನು ಮಹಾರಾಷ್ಟ್ರದಲ್ಲಿ ಇದೀಗ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಬಿಜೆಪಿ 105 ಸೀಟುಗಳನ್ನು ಗೆದ್ದು, ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆಯಾದರೂ, ಬಿಜೆಪಿಯಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ಕಳೆದ ಬಾರಿ ಅಂದರೆ 2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು. ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಮಹಾರಾಷ್ಟ್ರ ಬಿಜೆಪಿಯಲ್ಲಿ ದೇವೇಂದ್ರ ಫಡ್ನವಿಸ್ ಅವರಿಗೆ ಉತ್ತಮ ಸ್ಥಾನವಿದೆ. ಅಲ್ಲದೇ ಮಹಾರಾಷ್ಟ್ರದಲ್ಲೂ ಅವರು ಒಳ್ಳೆಯ ವರ್ಚಸ್ಸು ಹೊಂದಿದ್ದಾರೆ. ಆದರೆ, ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆ ಹಾಗೂ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ನಿರೀಕ್ಷಿತ ಮುನ್ನಡೆ ಸಿಕ್ಕಿಲ್ಲ. ಇವರ ನೇತೃತ್ವದಲ್ಲಿ ಸ್ಪರ್ಧಿಸಿದ ಚುನಾವಣೆಗಳಲ್ಲಿ ಬಿಜೆಪಿಗೆ ನಿರೀಕ್ಷೆಯಷ್ಟು ಸೀಟುಗಳು ಸಿಕ್ಕಿಲ್ಲ. ಇದೇ ಕಾರಣಕ್ಕಾಗಿ ಈ ಬಾರಿ ದೇವೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಲಿದೆಯೇ ಇಲ್ಲವೇ ಹೊಸ ನಾಯಕರನ್ನು ಹುಡುಕಲಿದೆಯೇ ಎನ್ನುವ ಅನುಮಾನ ಎದುರಾಗಿತ್ತು.
ಸರಣಿ ಚುನಾವಣೆಗಳಲ್ಲಿ ಹಿನ್ನಡೆ ಉಂಟಾದ ಹೊರತಾಗಿಯೂ ದೇವೇಂದ್ರ ಅವರಿಗೆ ಬಿಜೆಪಿ ಮಣೆ ಹಾಕಿದೆ. ಅದಕ್ಕೆ ಹಲವು ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೆಯದಾಗಿ ಬಿಜೆಪಿ ಈ ಬಾರಿ ಮಹಾರಾಷ್ಟ್ರದಲ್ಲಿ ಯಾವುದೇ ಹೊಸ ಬದಲಾವಣೆಯನ್ನು ಮಾಡುವ ಮೂಲಕ ಕರ್ನಾಟಕದಂತೆ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳಲು ಸಿದ್ಧವಿಲ್ಲ. ಅಲ್ಲದೇ ದೇವೇಂದ್ರ ಫಡ್ನವಿಸ್ ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು ಆರ್‌ಎಸ್‌ಎಸ್‌ನೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಲೇ ಆಡಳಿತರೂಢ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವುದರಿಂದ ಅವರಿಗೇ ಮಣೆ ಹಾಕಲಾಗಿದೆ.
ಹೊಸ ರಿಸ್ಕ್ ಇಲ್ಲ: ಇನ್ನು ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಹೈಕಮಾಂಡ್ ಹೊಸ ರಿಸ್ಕ್ ತೆಗೆದುಕೊಂಡಿಲ್ಲ. ಸಾಮಾನ್ಯವಾಗಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಾಗ ಬಿಜೆಪಿ ಹೈಕಮಾಂಡ್ ಆಡಳಿತ ಇರುವ ರಾಜ್ಯದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಹಾಗೂ ಸರ್ಜರಿಗಳನ್ನು ಮಾಡಿಕೊಳ್ಳುತ್ತಿತ್ತು. ಹರಿಯಾಣದಲ್ಲಿ ಈ ಕಾರ್ಯತಂತ್ರದ ಭಾಗವಾಗಿಯೇ ಚುನಾವಣೆಗೆ ಎರಡು ವರ್ಷಗಳ ಹಿಂದೆಯೇ ಮುಖ್ಯಮಂತ್ರಿಯನ್ನು ಸಹ ಬದಲಾಯಿಸಲಾಗಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಈ ರೀತಿಯ ಯಾವುದೇ ಬದಲಾವಣೆ ಮಾಡಿಲ್ಲ.
ಹಳೆ ನಾಯಕರಿಗೆ ಟಿಕೆಟ್: ಕರ್ನಾಟಕದಲ್ಲಿ 2023ನೇ ಸಾಲಿನಲ್ಲಿ ನಡೆಸಿದ್ದ ಪ್ರಯೋಗವನ್ನು ಬಿಜೆಪಿ ಸಂಪೂರ್ಣವಾಗಿ ಕೈ ಬಿಟ್ಟಿರುವಂತಿದೆ. 2023ನೇ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ಮಾದರಿಯ ಪ್ರಯೋಗವೊಂದನ್ನು ಮಾಡಿತ್ತು. ಅದರಂತೆ ಹಲವು ಹಳೆಯ ನಾಯಕರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಮಣೆ ಹಾಕಿತ್ತು. ಇದರಿಂದ ಬಿಜೆಪಿಗೆ ಭಾರೀ ಹೊಡೆತ ಬಿದ್ದಿತ್ತು.












Click it and Unblock the Notifications