Navya Haridas: ವಯನಾಡು ಉಪ ಚುನಾವಣೆ, ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಪರಿಚಯ
ತಿರುವನಂತಪುರ, ಅಕ್ಟೋಬರ್ 24: ವಯನಾಡು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್ ನಾಮಪತ್ರ ಸಲ್ಲಿಕೆ ಮಾಡಿದರು. ಉಪ ಚುನಾವಣೆ ಕಣ ಅಂತಿಮವಾಗಿದ್ದು, ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವದ್ರಾ ಕಣದಲ್ಲಿದ್ದಾರೆ. 2024ರ ಚುನಾವಣೆಯಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಹುಲ್ ಗಾಂಧಿ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗಿದೆ. ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇರಳ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ 39 ವರ್ಷದ ನವ್ಯಾ ಹರಿದಾಸ್ ಗುರುವಾರ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಕ್ಷೇತ್ರದಲ್ಲಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ, ಪ್ರಿಯಾಂಕಾ ವಾದ್ರಾ ನವ್ಯಾ ಹರಿದಾಸ್ ಎದುರಾಳಿಗಳು.

ಕೌನ್ಸಿಲರ್ ಆಗಿರುವ ನವ್ಯಾ ಹರಿದಾಸ್: ನವ್ಯಾ ಹರಿದಾಸ್ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಓದಿದ್ದಾರೆ. ,ಕ್ಯಾಲಿಕಟ್ ವಿಶ್ವವಿದ್ಯಾಲಯದ ಕೆಎಂಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಸದ್ಯ ಅವರು ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನವ್ಯಾ ಹರಿದಾಸ್ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಅವರ ಆಸ್ತಿ ಮೌಲ್ಯ ರೂ. 1,29,56,264. ಪ್ರಿಯಾಂಕಾ ವಾದ್ರಾ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಿಯಾಂಕಾ ವಾದ್ರಾ ಅಭ್ಯರ್ಥಿ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅವರು ಸಂಸತ್ ಪ್ರವೇಶ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕು.
ವಯನಾಡು ಕ್ಷೇತ್ರದಲ್ಲಿ 2009ರಿಂದ ಸತತವಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ 7,06,367 ಮತಗಳನ್ನು ಪಡೆದು 4,31,770 ಮತಗಳಿಂದ ಜಯಗಳಿಸಿದ್ದರು. ಸಿಪಿಐ ಅಭ್ಯರ್ಥಿ ಸೋಲಿಸಿದ್ದರು.
2024ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದು 3,64,445 ಮತಗಳ ಅಂತರದಿಂದ ಜಯಗಳಿಸಿದ್ದರು. ಸಿಪಿಐ ಅಭ್ಯರ್ಥಿ ಅನ್ನಿ ರಾಜಾ 2,83,023 ಮತಗಳನ್ನು ಪಡೆದರೆ, ಬಿಜೆಪಿಯ ಸುರೇಂದ್ರನ್ 1,41,045 ಮತಗಳನ್ನು ಗಳಿಸಿದ್ದರು. ಆದರೆ ರಾಯ್ ಬರೇಲಿಯಲ್ಲಿಯೂ ಜಯಗಳಿಸಿದ ಕಾರಣ ಅವರು ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬುಧವಾರ ನಾಮಪತ್ರ ಸಲ್ಲಿಕೆ ಮಾಡಿರುವ ಪ್ರಿಯಾಂಕಾ ವಾದ್ರಾ 11 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಅವರು 46.39 ಲಕ್ಷ ರೂ. ಆದಾಯಗಳಿಸಿದ್ದಾರೆ. 2019-20ರಲ್ಲಿ ಪ್ರಿಯಾಂಕಾ ವಾದ್ರಾ ಆದಾಯ 69.3 ಲಕ್ಷ ಇತ್ತು, 2020-21ರಲ್ಲಿ ಅದು 19.89 ಲಕ್ಷಕ್ಕೆ ಇಳಿಕೆಯಾಯಿತು. ಪ್ರಿಯಾಂಗಾ ವಾದ್ರಾ ಒಟ್ಟು ಆಸ್ತಿ ಮೌಲ್ಯ 11.99 ಕೋಟಿ ಮತ್ತು ಪತಿ ರಾಬರ್ಟ್ ವಾದ್ರಾ ಆಸ್ತಿ ಮೌಲ್ಯ 75.61 ಕೋಟಿ ರೂ.ಗಳು.
ಪ್ರಿಯಾಂಕಾ ಮತ್ತು ಸಹೋದರ ರಾಹುಲ್ ಗಾಂಧಿ ಜಂಟಿಯಾಗಿ ಸುಲ್ತಾನ್‌ಪುರ್‌ನಲ್ಲಿ ಕೃಷಿ ಭೂಮಿ, ಫಾರ್ಮ್ ಹೌಸ್ ಹೊಂದಿದ್ದಾರೆ. ಶಿಮ್ಲಾದಲ್ಲಿ ಪ್ರಿಯಾಂಕಾ 5.63 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರು. ಈಗ ಸಹೋದರಿಯೂ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರೆ ಅಣ್ಣ, ತಂಗಿ ಇಬ್ಬರು ಸಂಸತ್‌ನಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಕೂರಲಿದ್ದಾರೆ.











Click it and Unblock the Notifications