'ನಾವಿಬ್ಬರು, ನಮಗಿಬ್ಬರು' ನಿಯಮ ಜಾರಿಗೆ ಬಿಜೆಪಿ ಬೆಂಬಲ
ನವದೆಹಲಿ, ಫೆಬ್ರವರಿ 14: ಭಾರತದಲ್ಲಿ ಒಂದು ದಂಪತಿ ಎರಡು ಮಕ್ಕಳನ್ನು ಮಾತ್ರ ಹೊಂದುವ ನಿಯಮವನ್ನು ಜಾರಿಗೆ ತರುವುದಕ್ಕೆ ಬಿಜೆಪಿ ತನ್ನ ಬೆಂಬಲ ಸೂಚಿಸಿದೆ.
ಇರಾನ್ ಉದಾಹರಣೆ ನೀಡಿದ ಬಿಜೆಪಿ ವಕ್ತಾರ ಅಶ್ವಿನಿ ಉಪಾದ್ಯಾಯ, 'ಇರಾನ್ 1990 ರಲ್ಲೇ ಟೂ-ಚೈಲ್ಡ್ ಪಾಲಿಸಿಯನ್ನು ಜಾರಿಗೆ ತಂದಿತ್ತು. ಅದನ್ನು ಭಾರತದಲ್ಲೂ ಜಾರಿಗೆ ತರುವ ಅಗತ್ಯವಿದೆ' ಎಂದಿದ್ದಾರೆ.
ಭಾರತದಾದ್ಯಂತ ಟೂ ಚೈಲ್ಡ್ ಪಾಲಿಸಿಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ನಲ್ಲಿ ಫೆ.12 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಟೂ-ಚೈಲ್ಡ್ ಪಾಲಿಸಿಯನ್ನು ಜಾರಿಗೆ ತರುವುದಕ್ಕೆ ಅಗತ್ಯವಾದ ಫ್ಯಾಮಿಲಿ ಪ್ಲಾನಿಂಗ್ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಬೇಕಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಈಗಾಗಲೇ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ಟೂ ಚೈಲ್ಡ್ ಪಾಲಿಸಿ ಬಹುತೇಕ ಜಾರಿಗೆ ಬಂದಿದೆ. ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳವೇ ಅತೀ ದೊಡ್ಡ ಸಮಸ್ಯೆ ಎನ್ನಿಸಿರುವುದರಿಂದ ಈ ಯೋಜನೆಯನ್ನು ಜಾರಿಗೆ ತರುವುದು ಅಗತ್ಯ ಎನ್ನಿಸಿದೆ.
ನೆರೆಯ ಚೀನಾದಲ್ಲಿ ಜನಸಂಖ್ಯೆಯ ನಿಯಂತ್ರಣಕ್ಕಾಗಿ 1979 ರಿಂದಲೇ ಒನ್-ಚೈಲ್ಡ್ ಪಾಲಿಸಿಯನ್ನು ಜಾರಿಗೆ ತರಲಾಗಿದೆ. 2016 ರಲ್ಲಿ ಈ ನಿಯಮವನ್ನು ರದ್ದುಗೊಳಿಸಲಾಗಿದೆ.












Click it and Unblock the Notifications