ಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ನಾಣ್ಯದ ಎರಡು ಮುಖಗಳು: ರಾಹುಲ್ ಗಾಂಧಿ
ಹೈದರಾಬಾದ್, ಅಕ್ಟೋಬರ್ 28: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡೂ ಪಕ್ಷಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಮತ್ತು ಹಣದ ರಾಜಕೀಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ದೀಪಾವಳಿಗೆ ನಾಲ್ಕು ದಿನಗಳ ವಿರಾಮದ ನಂತರ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ ರಾಹುಲ್ ಗಾಂಧಿ ನಾರಾಯಣಪೇಟೆ ಜಿಲ್ಲೆಯ ಗುನ್‌ಮುಕ್ಲಾ, ಮರಿಕಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿ, ''ಕೇಂದ್ರದ ಮೂರು ರೈತ ವಿರೋಧಿ ಕಾನೂನುಗಳಿಗೆ ಟಿಆರ್‌ಎಸ್ ಸಂಪೂರ್ಣ ಬೆಂಬಲವನ್ನು ನೀಡಿದೆ. ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಕೇಂದ್ರದ ಎನ್‌ಡಿಎ ಸರ್ಕಾರವು ಮಂಡಿಸಿದ ಮಸೂದೆಗಳನ್ನು ಟಿಆರ್‌ಎಸ್ ಬೆಂಬಲಿಸುತ್ತದೆ'' ಎಂದರು.
''ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಕಾನೂನು ವಿರುದ್ಧ ನಿರ್ಣಯವನ್ನು ತಂದಿತು. ಆದರೆ, ಟಿಆರ್‌ಎಸ್ ಅದನ್ನು ಬೆಂಬಲಿಸಲಿಲ್ಲ. ನಮಗೆ ಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ಎಂದು ನಾನು ಇಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅವು ಒಂದೇ ನಾಣ್ಯದ ಎರಡು ಭಾಗಗಳು. ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ. ನೀವು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರು ಪರಸ್ಪರ ಬೆಂಬಲಿಸುತ್ತಾರೆ. ಟಿಆರ್‌ಎಸ್ ಅವರನ್ನು ದೆಹಲಿಯಲ್ಲಿ ಬೆಂಬಲಿಸುತ್ತದೆ. ಮತ್ತು ತೆಲಂಗಾಣದಲ್ಲಿ ಬಿಜೆಪಿ ಈ ಪಕ್ಷವನ್ನು (ಟಿಆರ್‌ಎಸ್) ಬೆಂಬಲಿಸುತ್ತದೆ'' ಎಂದರು.

''ಟಿಆರ್‌ಎಸ್ ಸರ್ಕಾರ ಬಹುಶಃ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಣ್ಣಿಸಿದ ರಾಹುಲ್ ಗಾಂಧಿ, 15,000 ಕೋಟಿ ರುಪಾಯಿ ಮಿಯಾಪುರ್ ಭೂ ಹಗರಣ ಮತ್ತು ತೆಲಂಗಾಣದ ಕಾಳೇಶ್ವರಂ ನೀರಾವರಿ ಯೋಜನೆಯನ್ನು ಉಲ್ಲೇಖಿಸಿ, ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಣದ ರಾಜಕೀಯದಲ್ಲಿ ತೊಡಗಿವೆ, ಅಧಿಕಾರ ಹಿಡಿಯಲು ಮತ್ತು ಸರ್ಕಾರಗಳನ್ನು ಉರುಳಿಸಲು ಕುದುರೆ ವ್ಯಪಾರ ಮಾಡುತ್ತಿವೆ'' ಎಂದರು
''ಟಿಆರ್‌ಎಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳಲ್ಲ, ಆದರೆ ಜನರಿಗಾಗಿ ಕೆಲಸ ಮಾಡದೆ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಉದ್ದೇಶ ಹೊಂದಿರುವ ವ್ಯಾಪಾರ ಸಂಸ್ಥೆಗಳು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೋಟು ಅಮಾನ್ಯೀಕರಣವು ದೇಶದ ಆರ್ಥಿಕತೆಯ ಬೆನ್ನೆಲುಬನ್ನು ಮುರಿದಿದೆ. ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿದೆ. 2016 ರ ನೋಟು ನಿಷೇಧ ಮತ್ತು ಜಿಎಸ್‌ಟಿ ಆಡಳಿತವು ಲಕ್ಷಾಂತರ ವ್ಯವಹಾರ ಸಂಸ್ಥೆಗಳನ್ನು ಮುಚ್ಚಿಸಿದೆ'' ಎಂದು ಹೇಳಿದರು.

''ದೇಶ ಅಥವಾ ತೆಲಂಗಾಣ ಉದ್ಯೋಗ ನೀಡಲು ಬಯಸಿದರೂ ಅದು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಯುಪಿಎ ಆಡಳಿತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 400 ರೂಪಾಯಿ ಇದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ದೂರು ನೀಡುತ್ತಿದ್ದರು. ಆದರೆ ಅವರು ಈಗ ಅದರ ಬೆಲೆ ₹ 1,000 ಕ್ಕಿಂತ ಹೆಚ್ಚಿದ್ದರೂ ಆ ಬಗ್ಗೆ ಮಾತನಾಡುವುದಿಲ್ಲ'' ಎಂದು ಹೇಳಿದರು.
ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಎತ್ತುವ ಉದ್ದೇಶದಿಂದ ಯಾತ್ರೆಯನ್ನು ಪ್ರಾರಂಭಿಸಲಾಗಿದೆ. ಯಾತ್ರೆಯ ಭಾಗವಾಗಿ 3,500 ಕಿ.ಮೀ ನಡೆಯುವುದು ಸುಲಭವಲ್ಲದಿದ್ದರೂ, ಜನರು ತೋರುವ ಪ್ರೀತಿ ಮತ್ತು ವಾತ್ಸಲ್ಯವು ಅದನ್ನು ಸಾಧ್ಯವಾಗಿಸುತ್ತದೆ ಎಂದರು. ದೀಪಾವಳಿಗೆ ನಾಲ್ಕು ದಿನಗಳ ವಿರಾಮದ ನಂತರ, ಗಾಂಧಿ ಗುರುವಾರ ಬೆಳಗ್ಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಅವರು ಪುನರಾರಂಭಿಸಿದರು.












Click it and Unblock the Notifications