ಕೇರಳ: ಹಕ್ಕಿ ಜ್ವರ ದಿಢೀರ್ ಏರಿಕೆ, ನೂರಾರು ಕೋಳಿಗಳ ಮಾರಣಹೋಮ
ತಿರುವನಂತಪುರಂ, ಡಿಸೆಂಬರ್ 20: ಕೋವಿಡ್ ಕಡಿಮೆಯಾಯಿತು ಎಂದು ನಿಟ್ಟುಸಿರುವ ಬಿಟ್ಟ ಬೆನ್ನಲ್ಲಿಯೇ ಕೇರಳ ರಾಜ್ಯದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಅನಾರೋಗ್ಯದ ಆತಂಕ ಮನೆ ಮಾಡಿದೆ.
ಕೇರಳದ ಕೋಟಯಂ ಜಿಲ್ಲೆಯ ಎರಡು ಗ್ರಾಮಗಳ ನಿವಾಸಿಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದ್ದು, ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ರೋಗ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಕೋಳಿಗಳ ಮಾರಣಹೋಮ ಮಾಡಲಾಗಿದೆ. ಈ ಕುರಿತು ಯಾವುದೇ ಆತಂಕ ಬೇಡ. ಹಕ್ಕಿ ಜ್ವರ ನಿಯಂತ್ರಣಕ್ಕೆ ಬರಲಿದೆ ಎಂದು ಆರೋಗ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಎರಡು ಗ್ರಾಮಗಳಲ್ಲಿ ಬ್ರಾಯ್ಲರ್ ಕೋಳಿಗಳಲ್ಲಿ ಕಳೆದ ವಾರ ಜ್ವರ ಕಾಣಿಸಿತ್ತು. ಈ ಕಾರಣಕ್ಕೆ ಈ ರೋಗ ವ್ಯಾಪಿಸದಂತೆ ತಡೆಯಲು ಇಲ್ಲಿನ ನೂರಾರು ಬಾತುಕೋಳಿಗಳು, ಕೋಳಿ ಹಾಗೂ ಇನ್ನಿತರ ಸಾಕು ಪಕ್ಷಿಗಳನ್ನು ಸಂಹರಿಸಲಾಗಿದೆ. ಕಳೆದ ಭಾನುವಾರ ರೈತರು ಕೊಳಗಳಲ್ಲಿನ ಬಾತುಕೋಳಿಗಳನ್ನು ಹಿಡಿದು ಆರೋಗ್ಯಾಧಿಕಾರಿಗಳ ನೀಡಿದ್ದಾರೆ ಎಂದು ಪಶುವೈದ್ಯಕೀಯ ಅಧಿಕಾರಿ ತಿಳಿಸಿದರು.

ಬಾತುಕೋಳಿಗಳು ವಾಸಿಸುವ ಕೊಳಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿದ್ದು, ಈ ಕಾರಣದಿಂದ ಈ ಭಾಗದಲ್ಲಿ ಸಾಕು ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ. ಈ ಪ್ರದೇಶದಿಂದ ಬೇರೆ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ.
ಕೋಳಿ ವ್ಯಾಪಾರದ ಮೇಲೆ ನಿರ್ಬಂಧ?
ಜಿಲ್ಲೆಯಲ್ಲಿ ಕಂಡು ಬಂದ ಈ ಹಕ್ಕಿ ಜ್ವರ ಒಂದು ವೇಳೆ ನಿಯಂತ್ರಣವಾಗದಂತೆ ವ್ಯಾಪಿಸಿದ್ದೇ ಆದಲ್ಲಿ ದಿನವೂ ನೂರಾರು, ಸಾವಿರಗಟ್ಟಲೇ ಕೋಳಿಗಳ ಮಾರಣ ಹೋಮ ಆಗಲಿದೆ. ಹಕ್ಕಿಗಳಿಂದ ಈ ರೋಗ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಮಕ್ಕಳು, ಹಿರಿಯ ನಾಗರಿಕರಿಗೆ ಇದರಿಂದ ಅಪಾಯವಿದೆ. ಮುಖ್ಯವಾಗಿ ಕೋಳಿ (ಚಿಕನ್) ಮಾರಾಟಕ್ಕೆ ಈ ಹಕ್ಕಿಜ್ವರದ ಕರಿಛಾಯೆ ಆವರಿಸಲಿದ್ದು, ವ್ಯಾಪಾರಕ್ಕೂ ತಾತ್ಕಾಲಿಕ ನಿರ್ಬಂಧ ಹೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಈ ಜಿಲ್ಲೆ ಹಾಗೂ ರಾಜ್ಯಾದ್ಯಂತ ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ.












Click it and Unblock the Notifications