Breaking: ಬಿಲ್ಕಿಸ್ ಅಪರಾಧಿಗಳ ಬಿಡುಗಡೆ, ಸುಪ್ರೀಂನಲ್ಲಿ ವಿಚಾರಣೆ
ನವದೆಹಲಿ, ಆಗಸ್ಟ್ 25: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅರ್ಜಿ ವಿಚಾರಣೆ ನಡೆಸಲಿದ್ದಾರೆ. ವಕೀಲೆ ಅಪರ್ಣಾ ಭಟ್ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ಅರ್ಜಿಯ ತುರ್ತು ವಿಚಾರಣೆಗೆ ಕೋರಿದ್ದರು.
2002ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಆರೋಪದಲ್ಲಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ 11 ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿದೆ. ಇವರ ಬಿಡುಗಡೆಯನ್ನು ವಿರೋಧಿಸಿ, ತಕ್ಷಣ ಅಪರಾಧಿಗಳ ಮರು ಬಂಧನಕ್ಕೆ ಒತ್ತಾಯಿಸುವ ಅರ್ಜಿಯನ್ನು ತುರ್ತಾಗಿ ಪರಿಗಣಿಸಲು ಸಿಜೆಐ ರಮಣ ಒಪ್ಪಿಕೊಂಡಿದ್ದಾರೆ. ಗುಜರಾತ್ ಸರ್ಕಾರವು ಕಳೆದ ವಾರ 11 ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.

ಗುಜರಾತ್ ಸರಕಾರದ ನಡೆಗೆ ಭಾರಿ ಆಕ್ಷೇಪ ಉಂಟಾಗಿತ್ತು. ಅನೇಕ ಮಂದಿ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದರು. ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿವೆ. ಅಪರಾಧಿಗಳು ಜೈಲಿನಿಂದ ಬಿಡುಗಡೆಗೊಂಡಿದ್ದಕ್ಕೆ ಹಲವು ಮಂದಿ ಸಿಹಿ ಹಂಚಿ ಸಂಭ್ರಮಿಸಿದ್ದ ಕೃತ್ಯಗಳು ನಡೆದಿದ್ದವು.
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಮಂದಿಯ ಬಿಡುಗಡೆ ವಿರುದ್ಧ ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನ, ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರು ಗುರುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಮರಣದಂಡನೆಗೆ ಅರ್ಹರಾಗಿರುವವರಿಗೆ ಲಡ್ಡು, ಹೂಮಾಲೆ ಹಾಕುವುದಲ್ಲ ಎಂದು ಕಿಡಿಕಾರಿದ್ದಾರೆ.

11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ತೃಣಮೂಲ ಸಂಸದೆ ಕೂಡ ಒಬ್ಬರು.
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅಪರಾಧಿಗಳ ಬಿಡುಗಡೆ ವಿರುದ್ಧದ ಮೂರು ಅರ್ಜಿಗಳನ್ನು ಆಲಿಸಲಿದ್ದಾರೆ. ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ವಕೀಲ ಕಪಿಲ್ ಸಿಬಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ, ಎರಡನೆಯದು ಮಹುವಾ ಮೊಯಿತ್ರಾ ಅವರು ಅಭಿಷೇಕ್ ಸಿಂಘ್ವಿ ಮೂಲಕ ಮತ್ತು ಮೂರನೇ ಅರ್ಜಿಯನ್ನು ವಕೀಲೆ ಅಪರ್ಣಾ ಭಟ್ ಸಲ್ಲಿಸಿದ್ದಾರೆ. ಈ ಮೂರು ಅರ್ಜಿಗಳನ್ನು ವಿಚಾರಣೆ ನಡೆಸಲಿದ್ದಾರೆ.
ಇದರ ಜೊತೆಗೆ ನ್ಯಾಯಮೂರ್ತಿ ಎನ್. ವಿ. ರಮಣ ಪೆಗಾಸಸ್ ಕಣ್ಗಾವಲು ಪ್ರಕರಣಸ ಸರಣಿಗಳು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಗಳ ಕುರಿತ ವಿವಾದಾತ್ಮಕ ಜುಲೈ 27ರ ತೀರ್ಪಿನ ಪರಿಶೀಲನೆಯನ್ನು ವಿಚಾರಣೆ ನಡೆಸಲಿದ್ದಾರೆ.
ಪೆಗಾಸಸ್ ಪ್ರಕರಣದಲ್ಲಿ ನ್ಯಾಯಾಲಯವು ನೇಮಿಸಿದ ಸಮಿತಿಯಯು ಜುಲೈನಲ್ಲಿ ವರದಿ ಸಲ್ಲಿಸಿದ ನಂತರ ನ್ಯಾಯಾಲಯವು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ. ಇತರ ಸಂಬಂಧಿತ ವಿಷಯಗಳ ಜೊತೆಗೆ ಭಾರತೀಯ ನಾಗರಿಕರ ಮೇಲೆಯೂ ಪೆಗಾಸಸ್ ಕಣ್ಗಾವಲು ಬಳಸಲಾಗಿದೆಯೇ ಎಂಬುದನ್ನು ಸಮಿತಿಯು ಪರಿಶೀಲಿಸುವ ನಿರೀಕ್ಷೆಯಿದೆ.












Click it and Unblock the Notifications