ದೀಪಾವಳಿಯಂದು ನರೇಂದ್ರ ಮೋದಿ, ಅಮಿತ್ ಶಾ ಮೇಲೆ ಅಡ್ವಾಣಿ ಟೀಕಾಸ್ತ್ರ!
ನವದೆಹಲಿ, ನ 11: ದೆಹಲಿಯ ನಂತರ ಬಿಹಾರ ಚುನಾವಣೆಯಲ್ಲೂ ಹೀನಾಯ ಸೋಲು ಅನುಭವಿಸಿದ ಮೇಲೆ ಬಿಜೆಪಿಯ ಹಿರಿ ತಲೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ದ ಗರಂ ಆಗಿದ್ದಾರೆ.
ಈಗಾಗಲೇ ಪಕ್ಷದ ಹಿರಿಯ ಮುಖಂಡರಾದ ಶತ್ರುಘ್ನ ಸಿನ್ಹಾ ಮತ್ತು ಹುಕುಂದೇವ್ ಯಾದವ್ ಅವರು ಸೋಲಿಗೆ ಕಾರಣರಾದವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಬಹಿರಂಗವಾಗಿ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾಗಿದೆ.
ಬಿಹಾರದಲ್ಲಿನ ಸೋಲಿಗೆ ಮೋಹನ್ ಭಾಗವತ್ ಕಾರಣ ಎನ್ನುವ ಪಕ್ಷದೊಳಗಿನ ಕೆಲವರ ಕೂಗನ್ನು ಒಪ್ಪಿಕೊಳ್ಳದ ಬಿಜೆಪಿಯ ಪ್ರಮುಖ ಮುಖಂಡರು, ಪಕ್ಷದ ಸೋಲನ್ನು ಸಾಮೂಹಿಕವಾಗಿ ಎಲ್ಲರೂ ವಹಿಸಿಕೊಳ್ಳುತ್ತೇವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಲಾಲ್ ಕೃಷ್ಣ ಅಡ್ವಾಣಿ, ಪಕ್ಷದ ಸೋಲಿಗೆ ಎಲ್ಲರೂ ಹೊಣೆ ಎಂದರೆ, ಸೋಲಿನ ಜವಾಬ್ದಾರಿಯನ್ನು ಯಾರೂ ವಹಿಸಿಕೊಳ್ಳಲು ಸಿದ್ದರಿರುವುದಿಲ್ಲ. (ಬಿಹಾರದಲ್ಲಿ ಮುಖಭಂಗ, ನಾಲ್ವರು ಕೇಂದ್ರ ಸಚಿವರ ತಲೆದಂಡ)
ಪಕ್ಷ ಗೆದ್ದಾಗ ಅದರ ಹೊಣೆ ಹೊರಲು ಸಿದ್ದರಿರುವವರು ಸೋತಾಗ ಯಾಕೆ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದವಿಲ್ಲ ಎಂದು ಪರೋಕ್ಷವಾಗಿ ಮೋದಿ ಮತ್ತು ಶಾ ಮೇಲೆ ಅಡ್ವಾಣಿ ಕಿಡಿಕಾರಿದ್ದಾರೆ.
ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಶಾಂತ ಕುಮಾರ್ ಮತ್ತು ಯಶವಂತ್ ಸಿನ್ಹಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಕಳೆದ ಒಂದು ವರ್ಷದಿಂದ ಪಕ್ಷ ಹೇಗೆ ದುರ್ಬಲಗೊಳ್ಳುತ್ತಿದೆ, ಜೊತೆಗೆ ಸೋಲಿನ ಪರಾಮರ್ಶೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಲಾಗಿದೆ. ಮುಂದೆ ಓದಿ..

ಅಡ್ವಾಣಿ ಸೇರಿದಂತೆ ಹಿರಿಯ ಮುಖಂಡರು
ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡವರನ್ನು ಮಾತ್ರ ಸೋಲಿಗೆ ಹೊಣೆ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಅಡ್ವಾಣಿ ಸೇರಿದಂತೆ ಹಿರಿಯ ಮುಖಂಡರು, ಇತ್ತೀಚಿನ ದಿನಗಳಲ್ಲಿ ಪಕ್ಷದ ತತ್ವ, ಸಿದ್ದಾಂತವನ್ನು ಹೇಗೆ ಗಾಳಿಗೆ ತೂರಲಾಗುತ್ತಿದೆ ಎನ್ನುವುದನ್ನೂ ವಿಮರ್ಶಿಸಬೇಕಾಗಿದೆ ಎಂದಿದ್ದಾರೆ.

ಹಿರಿಯ ತಲೆಗಳ ಬೇಸರ
ಬಿಹಾರದಲ್ಲಿನ ಸೋಲಿನ ಹೊಣೆಯನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಹಿಸಿಕೊಳ್ಳಬೇಕೆಂದು ಪಕ್ಷದಲ್ಲಿ ಭಾರೀ ಒತ್ತಡವಿತ್ತು. ಮೊದಲೇ ಮೋದಿ ಮೇಲೆ ಗರಂ ಆಗಿದ್ದ ಅಡ್ವಾಣಿ, ಜೋಷಿ, ಶಾಂತ ಕುಮಾರ್, ಯಶವಂತ್ ಸಿನ್ಹಾ ಬಹಿರಂಗವಾಗಿಯೇ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದರು.

ನರೇಂದ್ರ ಮೋದಿ ಮತ್ತು ಅಮಿತ್ ಶಾ
ಚುನಾವಣೆಯೆಂದ ಮೇಲೆ ಸೋಲು, ಗೆಲುವು ಇದ್ದದ್ದೇ. ಪಕ್ಷದ ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ವಹಿಸಿಕೊಳ್ಳುತ್ತೇವೆ ಎಂದು ಜೇಟ್ಲಿ ಹೇಳಿಕೆಗೆ ತೃಪ್ತಿಯಾಗದೇ, ಈಗ ಪಕ್ಧದ ಹಿರಿಯ ತಲೆಗಳು ಪರೋಕ್ಷವಾಗಿ ಮೋದಿ - ಶಾ ಜೋಡಿಯ ವಿರುದ್ದ ತಿರುಗಿ ಬಿದ್ದಿದ್ದಾರೆ.

ಅರುಣ್ ಶೌರಿ ಮತ್ತು ಕೆ ಎನ್ ಗೋವಿಂದಾಚಾರ್ಯ
ನಾಲ್ವರು ಹಿರಿಯರ ಹೇಳಿಕೆ ಅರುಣ್ ಶೌರಿ ಮತ್ತು ಕೆ ಎನ್ ಗೋವಿಂದಾಚಾರ್ಯ ಸಮ್ಮುಖದಲ್ಲಿ ಸಿದ್ದಪಡಿಸಿದ್ದು ಎನ್ನುವುದು ವಿಶೇಷ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎನ್ನುವ ವರದಿ ಬಿಹಾರ ಬಿಜೆಪಿ ಘಟಕದ ಕಾರ್ಯಕರ್ತರು ಮತ್ತು ರಾಜ್ಯ ಮಟ್ಟದ ನಾಯಕರಿಂದ ಬಂದ ನಂತರ ಅಡ್ವಾಣಿ ಸೇರಿದಂತೆ ನಾಲ್ವರು ಮೋದಿ - ಶಾ ವಿರುದ್ದ ಇನ್ನಷ್ಟು ಗರಂ ಆಗಿದ್ದಾರೆ ಎನ್ನುವುದು ಬಿಜೆಪಿ ಆಪ್ತವಲಯದಿಂದ ಬರುತ್ತಿರುವ ಸುದ್ದಿ.

ಬಿಜೆಪಿ ಮಾರ್ಗದರ್ಶಕ ಮಂಡಳಿ
75ವರ್ಷದ ಮೇಲ್ಪಟ್ಟ ಮುಖಂಡರನ್ನು ಸಂಪುಟ ರಚನೆಯ ವೇಳೆ ದೂರವಿಡಲಾಗಿತ್ತು. ಬದಲಿಗೆ 'ಬಿಜೆಪಿ ಮಾರ್ಗದರ್ಶಕ ಮಂಡಳಿ' ಯಲ್ಲಿ ಸದಸ್ಯರನ್ನಾಗಿ ಮಾಡಲಾಗಿತ್ತು. ಈ ಮಂಡಳಿಯಲ್ಲಿ ವಾಜಪೇಯಿ, ಮುರಳಿ ಮನೋಹರ್ ಜೋಷಿ, ಅಡ್ವಾಣಿ, ಯಶವಂತ್ ಸಿನ್ಹಾ ಮುಂತಾದವರಿದ್ದರು. ಆದರೆ ಈ ಮಂಡಳಿಯು ಒಮ್ಮೆಯೂ ಸಭೆ ಸೇರಿಲ್ಲ ಎನ್ನುವುದು ಹಿರಿಯ ಮುಖಂಡರ ಕೋಪಕ್ಕೂ ಕಾರಣವಾಗಿರಬಹುದು.












Click it and Unblock the Notifications