ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಸತ್ತವರಿಗೆ ಕುಟುಂಬಕ್ಕೆ ಪರಿಹಾರವಿಲ್ಲ ಎಂದ ನಿತೀಶ್ ಕುಮಾರ್!
ಪಾಟ್ನಾ, ಡಿಸೆಂಬರ್ 16: ಬಿಹಾರದ ಸರನ್ ಜಿಲ್ಲೆಯ ಚಪ್ರಾದಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 65 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಆರು ವರ್ಷಗಳ ಹಿಂದೆ 2016ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯವನ್ನು ನಿಷೇಧಿಸಿದ ನಂತರದಲ್ಲಿ ನಡೆದ ಅತಿದೊಡ್ಡ ದುರಂತವಾಗಿದೆ.
ರಾಜ್ಯದಲ್ಲಿ ವಿಷಕಾರಿ ಮದ್ಯವನ್ನು ನಿಷೇಧಿಸುವಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರವು ಲೋಪವೆಸಗಿದೆ ಎಂದು ಪ್ರತಿಪಕ್ಷ ಬಿಜೆಪಿಯು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿತು. ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿದವರಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ತಮ್ಮ ನಿಲುವನ್ನು ಪುನರುಚ್ಚರಿಸಿದರು.
ಬಿಹಾರದಲ್ಲಿ ನಿಷೇಧದ ಮೊದಲು ಮತ್ತು ನಂತರ ವಿಷಕಾರಿ ಮದ್ಯ ಸೇವಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸಿದರು. ಈ ನಿಷೇಧವಿಲ್ಲದ ಇತರ ಸ್ಥಳಗಳಲ್ಲಿ ಇನ್ನೂ ವಿಷಕಾರಿ ಮದ್ಯವನ್ನು ಸೇವಿಸಿ ಜನರು ಸಾಯುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.

ತಮ್ಮ ಹೇಳಿಕೆ ಪುನರ್ ಉಚ್ಛರಿಸಿದ ನಿತೀಶ್ ಕುಮಾರ್
"ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದೆ. ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಇಂಥ ಘಟನೆಗಳು ಎಲ್ಲಿ ಆಗುತ್ತಿಲ್ಲ ಹೇಳಿ. ಎಲ್ಲಿಯಾದರೂ ಹೋಗಿ ಅದೇ ಕಥೆಯಾಗಿದೆ. ಅವರು ವಿಷಕಾರಿ ಮದ್ಯದಿಂದ ಸತ್ತಾಗ, ನೀವು ಅದನ್ನು ಕುಡಿದರೆ ನೀವು ಸಾಯುತ್ತೀರಿ ಎಂದು ನಾವು ಹೇಳುತ್ತಿದ್ದೇವೆ. ಅವರು ಇತರ ಸ್ಥಳಗಳಲ್ಲಿ ಸತ್ತಾಗ ನೀವು ಪ್ರಕಟಿಸುತ್ತೀರಾ? ನಾನು ಎಲ್ಲೆಡೆ ಪುನರುಚ್ಚರಿಸುತ್ತೇನೆ, ಯಾರಾದರೂ ಮದ್ಯದ ಪರವಾಗಿ ಮಾತನಾಡುತ್ತಿದ್ದರೆ, ಅದು ನಿಮಗೆ ಎಂದಿಗೂ ಪ್ರಯೋಜನವಾಗುವುದಿಲ್ಲ," ಎಂದು ನಿತೀಶ್ ಕುಮಾರ್ ಹೇಳಿದರು.

ಬಿಜೆಪಿ ವಿರುದ್ಧ ತಿರುಗು ಬಾಣ ಬಿಟ್ಟ ಸಿಎಂ ನಿತೀಶ್ ಕುಮಾರ್
ಬಿಹಾರದ ಹೊರತಾಗಿ ಇತರೆ ರಾಜ್ಯಗಳಲ್ಲೂ ಇಂಥ ದುರಂತಗಳು ನಡೆದಿಲ್ಲವೇ ಎನ್ನುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ರಾಜ್ಯಗಳತ್ತ ತಿರುಗುಬಾಣವನ್ನು ಬಿಟ್ಟರು. ಆಗಲೂ ನೀವು ಯಾವುದೇ ಅಸಮಾನತೆ ಇಲ್ಲದೇ ವರದಿ ಪ್ರಕಟಿಸುತ್ತೀರಾ ಎಂದು ಪ್ರಶ್ನಿಸಿದರು. "ಅದೊಂದು ಸೇತುವೆ ಕುಸಿದ ರಾಜ್ಯದಲ್ಲಿ ಕೇವಲ ಒಂದು ಸುದ್ದಿ ಪ್ರಕಟವಾಯಿತು, ನಂತರ ಏನೂ ಇಲ್ಲ. ಬಂಗಾಳದಲ್ಲಿ ಅದೇ ರೀತಿ ಸಂಭವಿಸಿದಾಗ ಅದು ಇಷ್ಟು ದಿನ ಓಡಿತು, ನಾವು ಅದನ್ನು ಹೆಚ್ಚು ಜನಪ್ರಿಯಗೊಳಿಸುತ್ತೇವೆ, ನೀವು ಮದ್ಯ ಸೇವಿಸಿದರೆ ಸಾಯುತ್ತೀರಿ. ಸತ್ತವರು ಕುಡಿದ ನಂತರ, ನಾವು ಅವರಿಗೆ ಪರಿಹಾರವನ್ನು ನೀಡುತ್ತೇವೆಯೇ? ಅದು ಆಗುವುದಿಲ್ಲ," ಎಂದು ನಿತೀಶ್ ಕುಮಾರ್ ಹೇಳಿದರು.

ನಕಲಿ ಮದ್ಯ ಸೇವಿಸಿ ಸತ್ತವರ ಕುಟುಂಬಕ್ಕಿಲ್ಲ ಪರಿಹಾರ
ನಿನ್ನೆಯೂ ನಕಲಿ ಮದ್ಯವನ್ನು ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರಾಕರಿಸಿದ್ದರು. ರಾಜ್ಯದಲ್ಲಿ ಈಗಾಗಲೇ ನಿಷೇಧವನ್ನು ಹೊಂದಿರುವಾಗ ಜನರು "ಹೆಚ್ಚು ಜಾಗರೂಕರಾಗಿರಬೇಕು" ಎಂದು ಹೇಳಿದರು. "ಜೋ ಶರಬ್ ಪೀಯೇಗಾ, ವೋ ತೋ ಮರೇಗಾ ಹೈ ನಾ... ಉದಾಹರನ್ ಸಾಮ್ನೆ ಹೈ - ಪೀಯೋಗೆ ತೋ ಮರೇಗಾ. (ಮದ್ಯ ಸೇವಿಸುವವರು ನಿಸ್ಸಂಶಯವಾಗಿ ಸಾಯುತ್ತಾರೆ. ಈ ಪ್ರಕರಣದಲ್ಲಿ ನಮಗೆ ಉದಾಹರಣೆ ಇದೆ)" ಎಂದು ಸಿಎಂ ನಿತೀಶ್ ಕುಮಾರ್ ಹಿಂದಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದರ ಬೆನ್ನಲ್ಲೇ ಡಿಸೆಂಬರ್ 14ರಂದು ವಿಧಾನಸಭೆಯಲ್ಲಿ ಪ್ರತಿಭಟನೆಯನ್ನು ಎದುರಿಸುತ್ತಿರುವಾಗ ಪ್ರತಿಪಕ್ಷ ಬಿಜೆಪಿಯು "ಶರಬಿ ಹೋ ತುಮ್ (ನೀವು ಕುಡುಕ)" ಎಂದು ತೀವ್ರವಾಗಿ ಕಿರುಚಿದ್ದರು.

ಮಾನವ ಹಕ್ಕು ಆಯೋಗದಿಂದ ನೋಟಿಸ್
ಬಿಹಾರದಲ್ಲಿ ನಡೆದ ನಕಲಿ ಮದ್ಯ ಸೇವನೆ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮತ್ತು ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಏಪ್ರಿಲ್ 2016 ರಲ್ಲಿ ಬಿಹಾರದಲ್ಲಿ ಮದ್ಯದ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಆದರೂ ಅದರ "ಅನುಷ್ಠಾನವು ಅಸ್ತವ್ಯಸ್ತವಾಗಿದೆ" ಎಂದು ಆಯೋಗದ ಹೇಳಿಕೆಯಲ್ಲಿ ಗಮನಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಇದೇ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ ಐವರು ಮೃತಪಟ್ಟಿದ್ದರು.












Click it and Unblock the Notifications