Bidar: ಬೀದರ್ ಎಟಿಎಂ ದರೋಡೆ ಗ್ಯಾಂಗ್ ಪತ್ತೆ ಹಚ್ಚಿದ ಪೊಲೀಸರು: ಛತ್ತಿಸಗಢ ಮೂಲದ ಮನೀಶ್‌ನಿಂದ ಕೃತ್ಯ
ಬೀದರ್ 18: ಜನವರಿ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವಾಗ ಗುಂಡಿನ ದಾಳಿ ಮಾಡಿ ಹಣ ದರೋಡೆ ಮಾಡಿದ ಇಬ್ಬರು ಆರೋಪಿಗಳ ಪೈಕಿ ಒಬ್ಬರ ಗುರುತು ಪತ್ತೆ ಮಾಡಲಾಗಿದೆ. ಘಟನೆ ನಡೆದು ಎರಡು ದಿನದಲ್ಲಿ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ವೇಳೆ ದರೋಡೆ ಮಾಡಿದ ಇಬ್ಬರಲ್ಲಿ ಒಬ್ಬ ಆರೋಪಿ ಗುರುತು ಪತ್ತೆಯಾಗಿದೆ.
ಜನವರಿ 16 ಗುರುವಾರ ಬೀದರ್‌ನ ಎಸ್‌ಬಿಐ ಬ್ಯಾಂಕ್ ಬಳಿ ಇದ್ದ ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣದ ಬಾಕ್ಸ್‌ನೊಂದಿಗೆ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದರು. ಗುಂಡಿನ ದಾಳಿಯಲ್ಲಿ ಓರ್ವ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಆರೋಪಿಗಳ ಜಾಲ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಉತ್ತರ ಭಾರತದಲ್ಲಿ ಕಳ್ಳರು ಇರುವ ಶಂಕೆ ವ್ಯಕ್ತವಾಗಿತ್ತು. ಇದೇ ಸುಳಿವನ್ನು ಆಧಾರವಾಗಿಟ್ಟುಕೊಂಡು ದರೋಡೆಕೋರನ ಗುರುತು ಪತ್ತೆ ಮಾಡಿದ್ದಾರೆ ಪೊಲೀಸರು.

ಛತ್ತಿಸ್‌ಗಢ ಮೂಲದ ಮನೀಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ದರೋಡೆ ಹಿಂದೆ ಬಿಹಾರ್ ಗ್ಯಾಂಗ್ ಇದೆ ಎನ್ನಲಾಗುತ್ತಿದೆ. ಚಡ್ಡಿ ಗ್ಯಾಂಗ್, ಬನಿಯಾನ್ ಗ್ಯಾಂಗ್ ರಾಜ್ಯದಲ್ಲಿ ಸಾಕಷ್ಟು ದರೋಡೆ ಪ್ರಕರಣದಲ್ಲಿ ಭಾಗಿಯಾಗಿವೆ. ರಾಜ್ಯಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಂಟ್ ಗ್ಯಾಂಗ್‌ಗಳು ಇವಾಗಿದ್ದು, ಈ ಗ್ಯಾಂಗ್‌ಗೆ ಸೇರಿದ ದರೋಡೆಕೋರರ ಗ್ಯಾಂಗ್ ಇದಾಗಿದಿಯಾ ಎನ್ನುವ ಅನುಮಾನವಿದೆ.
ಆದರೆ ಬಿಹಾರ್‌ನಲ್ಲಿ ನಡೆದ ಗುಂಡಿನ ದಾಳಿಗೂ ಬೀದರ್‌ನಲ್ಲಿ ನಡೆದ ಗುಂಡಿನ ದಾಳಿಗೂ ಸಾಮ್ಯತೆ ಕಂಡು ಬಂದಿದೆ. ಬಿಹಾರದ ಅಮಿತ್ ಗ್ಯಾಂಗ್‌ನಿಂದ ಕೃತ್ಯ ನಡೆದಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಮೀತ್ ಬಿಹಾರ್ ಮೂಲದ ಗ್ಯಾಂಗ್‌ಸ್ಟರ್ ಆಗಿದ್ದಾನೆ. ಹೀಗಾಗಿ ಪೊಲೀಸರು ದರೋಡೆಕೋರರನ್ನು ಪತ್ತೆ ಮಾಡಲು ಬಹುದೊಡ್ಡ ಅಸ್ತ್ರ ಚಿಕ್ಕಂತಾಗಿದ್ದು, ಇದೇ ಅಸ್ತ್ರವನ್ನಿಟ್ಟುಕೊಂಡು ಕೆಲವೇ ದಿನದಲ್ಲಿ ಮತ್ತೊರ್ವ ಆರೋಪಿಯನ್ನು ಪತ್ತೆ ಮಾಡುವ ಸಾಧ್ಯತೆ ಇದೆ.
ಮೃತರಿಗೆ 8 ಲಕ್ಷ ಪರಿಹಾರ ಘೋಷಣೆ
ಇನ್ನೂ ಎಟಿಎಂ ಬಳಿ ಗಂಡೇಟಿಗೆ ಬಲಿಯಾದ ಸಿಬ್ಬಂದಿ ಬೆಮಳಖೇಡ ಗ್ರಾಮದ ಗಿರಿ ವೆಂಕಟೇಶ ಎಂಬುವವರ ಕುಟುಂಬಸ್ಥರಿಗೆ 8 ಲಕ್ಷ ಪರಿಹಾರ ನೀಡುವುದಾಗಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಘೋಷಣೆ ಮಾಡಿದ್ದಾರೆ. ಮೃತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಮಾತನಾಡಿಸಿದ ಈಶ್ವರ್ ಖಂಡ್ರೆ ಮೃತನ ತಾಯಿಗೆ ಐದು ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ 10 ಪೊಲೀಸ್ ತಂಡ
ಬೀದರ್‌ನಲ್ಲಿ ಹಣ ಲೂಟಿ ಮಾಡಿದ ಆರೋಪಿಗಳು ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಪರಾರಿಯಾಗಲು ಬಸ್ ಬುಕ್ ಮಾಡಿದ್ದರು. ಆದರೆ ಆರೋಪಿಗಳ ಬಳಿ ಹಣ ಇರುವುದನ್ನು ಗಮನಿಸಿದ ಸಾರಿಗೆ ಸಂಸ್ಥೆ ಮ್ಯಾನೇಜರ್ ಮೇಲೂ ಗುಂಡು ಹಾರಿಸಿದ್ದಾರೆ.
ಹೀಗಾಗಿ ಹೈದರಾಬಾದ್ ಹಾಗೂ ಬೀಧರ್ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 10 ಪೊಲೀಸ್ ತಂಡವನ್ನು ರಚನೆ ಮಾಡಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳ ಸುಳಿವು ಸಿಕ್ಕ ಸ್ಥಳಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ಶೀಘ್ರದಲ್ಲಿ ಸೆರೆ ಹಿಡಿಯುವ ಭರವಸೆಯನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ನೀಡಿದ್ದಾರೆ.












Click it and Unblock the Notifications