ಆರೆಸ್ಸೆಸ್ ವಿರುದ್ಧ ಹೇಳಿಕೆ, ರಾಹುಲ್ ಗೆ ಸಮನ್ಸ್
ಥಾಣೆ, ಜೂ.12: 'ಮಹಾತ್ಮಗಾಂಧಿ ಕೊಂದದ್ದು ಆರೆಸ್ಸೆಸ್ ಜನ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ಮಹಾರಾಷ್ಟ್ರದ ಥಾಣೆಜಿಲ್ಲೆಯ ಭಿವಾಂಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.
ಆರೆಸ್ಸೆಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣದ ಅರ್ಜಿ ಪರಿಶೀಲಿಸಿದ ಭಿವಾಂಡಿಯ ಕೋರ್ಟ್, ರಾಹುಲ್ ಗಾಂಧಿ ಅವರು ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಆರೆಸ್ಸೆಸ್ ನ ಭಿವಾಂಡಿ ಘಟಕದ ಕಾರ್ಯದರ್ಶಿ ರಾಜೇಶ್ ಕುಂಟೆ ಎಂಬುವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಇತಿಹಾಸವನ್ನು ತಿರುಚುವುದು, ಆರೆಸ್ಸೆಸ್ ಸಂಘದ ಮಾನಕ್ಕೆ ಹಾನಿ ತಂದಿರುವಂಥ ಹೇಳಿಕೆಯನ್ನು ರಾಹುಲ್ ನೀಡಿದ್ದಾರೆ ಎಂದು ರಾಜೇಶ್ ಪರ ವಕೀಲ ಗಣೇಶ್ ಧಾರ್ಘಾಲ್ಕರ್ ಕೋರ್ಟಿಗೆ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಜೆಎಂಎಫ್ ಸಿ ಎಸ್ ವಿ ಸ್ವಾಮಿ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 500ರ ಪ್ರಕಾರ ರಾಹುಲ್ ವಿರುದ್ಧ ಸಮನ್ಸ್ ಜಾರಿಗೊಳಿಸಿದ್ದಾರೆ. ಮಾ.6 ರಂದು ಸೊನಾಲೆ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ 'ಮಹಾತ್ಮಾಗಾಂಧಿ ಅವರನ್ನು ಕೊಂದದ್ದು ಆರೆಸ್ಸೆಸ್ ಮಂದಿ' ಎಂದು ಹೇಳಿದ್ದರು.(ಪಿಟಿಐ)












Click it and Unblock the Notifications