Breaking news: ಭಾರತರತ್ನ ಲತಾ ಮಂಗೇಷ್ಕರ್ ವಿಧಿವಶ
ಮುಂಬೈ, ಫೆಬ್ರವರಿ 6: ಭಾರತದ ಅಮರ ದನಿ, ಭಾರತರತ್ನ ಲತಾ ಮಂಗೇಷ್ಕರ್ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಮುಂಜಾನೆ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಭಿಮಾನಿಗಳು, ಕುಟುಂಬ ವರ್ಗದ ಪ್ರಾರ್ಥನೆ ಫಲಿಸಲಿಲ್ಲ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡರೂ ಲತಾ ಅವರ ಆರೋಗ್ಯ ಕ್ಷೀಣಿಸಿ, ಇಹಲೋಕವನ್ನು ತೊರೆದಿದ್ದಾರೆ. ಲತಾ ಅವರು ಸಹೋದರಿಯರಾದ ಉಷಾ ಮಂಗೇಶ್ಕರ್, ಮೀನಾ ಖಾಡಿಕರ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ತೊರೆದಿದ್ದಾರೆ.
ಶನಿವಾರ ಸಂಜೆ, ಲತಾ ಮಂಗೇಶ್ಕರ್ ಅವರ ಸೋದರಿ ಗಾಯಕಿ ಆಶಾ ಭೋಂಸ್ಲೆ ಮತ್ತು ಹೃದಯನಾಥ್ ಮಂಗೇಶ್ಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಲತಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದರು. ಕುಟುಂಬ ಸದಸ್ಯರಲ್ಲದೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ, ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್, ಕೇಂದ್ರ ಸಚಿವ ಪಿಯೂಷ್ ಗೋಯಲ್, ಬಿಜೆಪಿ ನಾಯಕ ಎಂ.ಪಿ. ಲೋಧಾ ಮತ್ತು ಇತರರು ಮಂಗೇಶ್ಕರ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಬೆಳಗ್ಗೆ 11 ಗಂಟೆಯಿಂದ 2.30ರೊಳಗೆ ತರಲಾಗುತ್ತದೆ. ಕುಟುಂಬಸ್ಥರು ಹಿಂದೂ ಸಂಪ್ರದಾಯಕ್ಕೆ ತಕ್ಕಂತೆ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆ ಸರ್ಕಾರ ಎರಡು ದಿನ ಶೋಕಾಚರಣೆಗೆ ಆದೇಶ ಹೊರಡಿಸಿದೆ. ಲತಾ ಮಂಗೇಶ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.
ಗಾನ ಕೋಗಿಲೆ ಎನಿಸಿಕೊಂಡ ಲತಾ
1929ರ ಸೆಪ್ಟೆಂಬರ್ 28ರಂದು ಜನಿಸಿ ಲತಾ ಅವರ ಮೊದಲ ಹೆಸರು ಹೇಮಾ ಮಂಗೇಷ್ಕರ್, ಸುಮಾರು 36 ಸಾವಿರಕ್ಕೂ ಅಧಿಕ ಹಾಡುಗಳಿಗೆ ದನಿ ನೀಡಿದ ಕೀರ್ತಿ ಲತಾ ಅವರದ್ದು. ಸಂಗೀತ ನಿರ್ದೇಶಕರಾಗಿಯೂ ಲತಾ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಲತಾ ಮಂಗೇಶ್ಕರ್ ಅವರ ಸಾಧನೆಗೆ ಮನ್ನಣೆ ನೀಡಿ ಭಾರತ ಸರ್ಕಾರವು 2001ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ಪ್ರದಾನ ಮಾಡಿ ಗೌರವಿಸಿತ್ತು. ಚಿತ್ರರಂಗದಲ್ಲಿನ ಸೇವೆಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು 1989ರಲ್ಲಿ ಲತಾ ಅವರು ಪಡೆದಿದ್ದರು. ಇದಲ್ಲದೆ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೂರು ರಾಷ್ಟ್ರ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿದೆ. ಕನ್ನಡಲ್ಲೂ 'ಬೆಳ್ಳನೆ ಬೆಳಗಾಯಿತು' ಎನ್ನುವ ಒಂದೇ ಒಂದು ಕನ್ನಡ ಹಾಡನ್ನು ಹಾಡಿದ್ದರು.
ಎಂದೂ ಮರೆಯದಂಥ ಹಾಡುಗಳು
ಗಿ ರಾತೊನ್ ಮೇ, ತೇರೆ ಬಿನಾ ಜಿಂದಗಿ ಸೇ, ತುಮ್ ಆ ಗಯೇ ಹೋ ನೂರ್ ಆ ಗಯಾ, ಕೋರಾ ಕಾಗಜ್, ನೈನಾ ಬರ್ಸೆ ರಿಮ್ ಜಿಮ್, ತೂ ಜಹಾನ್ ಜಹಾನ್ ಚಲೇಗಾ, ಇನ್ಹಿ ಲೋಗೋನ್ ನೆ, ಲಗ್ ಜಾ ಗಲೇ ಸೆ ಫಿರ್, ದೇಖಾ ಏಕ್ ಖ್ವಾಬ್ ಮುಂತಾದ ಹಾಡುಗಳನ್ನು ಮರೆಯಲು ಸಾಧ್ಯವಿಲ್ಲ.
ಶಂಕರ್ ಜೈಕಿಶನ್, ನೌಶಾದ್ ಅಲಿ, ಎಸ್‌ಡಿ ಬರ್ಮನ್, ಸರ್ದುಲ್ ಸಿಂಗ್ ಕ್ವಾತ್ರಾ, ಅಮರನಾಥ್, ಹುಸೆನ್‌ಲಾಲ್, ಸಿ. ರಾಮಚಂದ್ರ, ಹೇಮಂತ್ ಕುಮಾರ್, ಸಲೀಲ್ ಚೌಧರಿ, ದತ್ತಾ ನಾಯಕ್, ಖಯ್ಯಾಮ್, ರವಿ, ಸಜ್ಜದ್ ಹುಸೇನ್, ರೋಷನ್, ಕಲ್ಯಾಣ್‌ಜಿ-ಆನಂದಜಿ, ವಸಂತ ದೇಸಾಯಿ ಮುಂತಾದ ಸಂಗೀತ ಸಂಯೋಜಕರ ಹಾಡಿಗೆ ದನಿ ನೀಡಿದ್ದರು. ಇವರಲ್ಲದೆ ಸುಧೀರ್ ಫಡ್ಕೆ, ಹಂಸರಾಜ್ ಬೆಹ್ಲ್, ಮದನ್ ಮೋಹನ್, ಲಕ್ಷ್ಮೀಕಾಂತ್-ಪ್ಯಾರೇಲಾಲ್, ಎಆರ್ ರಹಮಾನ್ ಸಂಯೋಜನೆಯಲ್ಲೂ ಹಾಡಿದ್ದಾರೆ.












Click it and Unblock the Notifications