
ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಹೂಗುಚ್ಛದೊಂದಿಗೆ ಸ್ವಾಗತಿಸಿದ ಶ್ವಾನಗಳು
ಭೋಪಾಲ್, ಡಿಸೆಂಬರ್ 02: ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪಕ್ಷದ 'ಭಾರತ್ ಜೋಡೊ ಯಾತ್ರೆ' ವೇಳೆ ಚಹಾ ಕುಡಿಯಲು ನಿಂತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶ್ವಾನವೊಂದು ಹೂಗುಚ್ಛಗಳೊಂದಿಗೆ ಸ್ವಾಗತಿಸಿತು.
ಆರು ವರ್ಷದ ಲ್ಯಾಬ್ರಡಾರ್ ಶ್ವಾನಗಳ ಮಾಲೀಕರಾದ ಸರ್ವಮಿತ್ರ ನಾಚನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ತಮ್ಮ ಸಾಕು ಪ್ರಾಣಿಗಳೊಂದಿಗೆ ಮಧ್ಯಪ್ರದೇಶದ ತನೋಡಿಯಾ ಪಟ್ಟಣಕ್ಕೆ ಬಂದಿದ್ದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ನಟಿ ಸ್ವರಾ ಭಾಸ್ಕರ್
इस सफर के राहगीर हैं कई
— Congress (@INCIndia) December 2, 2022
और हर राहगीर का स्वागत है...#BharatJodoYatra pic.twitter.com/j8qZcvYFA1

ಲಿಜೋ ಹಾಗೂ ರೆಕ್ಸಿಯಿಂದ ರಾಹುಲ್‌ಗೆ ಸ್ವಾಗತ
ಲಿಜೋ ಮತ್ತು ರೆಕ್ಸಿ ಎಂಬ ಶ್ವಾನಗಳು 'ಚಲೇ ಕದಮ್, ಜೂಡ್ ವತನ್' ಹಾಗೂ 'ನಫ್ರತ್ ಛೋಡೊ, ಭಾರತ್ ಜೋಡೊ' ಎಂಬ ಸಂದೇಶಗಳನ್ನು ಹೊಂದಿದ್ದ ಹೂಗುಚ್ಛಗಳ ಬುಟ್ಟಿಯನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸಿದವು.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಇಂದೋರ್ ಮೂಲಕ ನಾಚನ್, 'ನಾವು ಭಾರತ್ ಜೋಡೊ ಯಾತ್ರೆಗಾಗಿ ವಿಭಿನ್ನವಾದದ್ದನ್ನು ಮಾಡಲು ಬಯಸಿದ್ದೆವು. ಇದನ್ನು ಮೊದಲಿನಿಂದಲೂ ವಿಚಾರಿಸಿದ್ದೆವು. ರಾಹುಲ್ ಗಾಂಧಿ ಅವರಿಗೆ ಹೂಗುಚ್ಛಗಳನ್ನು ಹಸ್ತಾಂತರಿಸಲು ನಾವು ಶ್ವಾನಗಳಿಗೆ ತರಬೇತಿ ನೀಡಿದ್ದೇವೆ' ಎಂದು ತಿಳಿಸಿದ್ದಾರೆ.
ಗಾಂಧಿಯವರು ಲಿಜೋ ಮತ್ತು ರೆಕ್ಸಿ ಅವರಿಂದ ಹೂಗುಚ್ಛಗಳನ್ನು ತೆಗೆದುಕೊಂಡಿದ್ದಲ್ಲದೆ, ಈ ಸಂದರ್ಭದಲ್ಲಿ ಅವುಗಳೊಂದಿಗೆ ಫೋಟೊಗಳನ್ನೂ ಸಹ ಪಡೆದರು ಎಂದು ಹೇಳಲಾಗಿದೆ.

ಭಾರತ್ ಜೋಡೊ ಯಾತ್ರೆಗೆ ಮಧ್ಯಪ್ರದೇಶದಲ್ಲಿ ಭಾರೀ ಬೆಂಬಲ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಮಧ್ಯ ಪ್ರದೇಶದಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಬುರ್ಹಾನ್‌ಪುರ, ಖಾಂಡ್ವಾ, ಖಾರ್ಗೋನ್ ಮತ್ತು ಎಂಪಿಯ ಇಂದೋರ್ ಜಿಲ್ಲೆಗಳ ಮೂಲಕ ಯಾತ್ರೆ ಹಾದುಹೋಗಿದೆ. ಮಧ್ಯಪ್ರದೇಶದ ಕೊನೆಯ ಜಿಲ್ಲೆಯಾದ ಅಗರ್ ಮಾಲ್ವಾದಲ್ಲಿ ಯಾತ್ರೆ ಇಂದು ಸಾಗಿತು.
ಬಿಜೆಪಿ ಆಡಳಿತ ಇರುವ ಈ ಯಾತ್ರೆಗೆ ಮಧ್ಯ ಪ್ರದೇಶದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ಸಿನಿಮಾ ನಟರು, ಕಾರ್ಮಿಕರು, ಮಾಜಿ ಸೈನಿಕರು ಸೇರಿದಂತೆ ಲಕ್ಷಾಂತರ ಜನರು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಡಿಸೆಂಬರ್ 4 ರಂದು ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
ಗುರುವಾರ ಉಜ್ಜಯನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು.
'ಭಾರತದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಹಾದಿಗಳು ಮುಚ್ಚಲ್ಪಟ್ಟಿವೆ. ಈ ಕಾರಣಕ್ಕಾಗಿಯೇ ಭಾರತ್ ಜೋಡೊ ಯಾತ್ರೆಯನ್ನು ನಾವು ಆರಂಭಿಸಿದ್ದೇವೆ. ಸಂಸತ್, ಚುನಾವಣಾ ವ್ಯವಸ್ಥೆ, ಪತ್ರಿಕಾ ರಂಗ ಸೇರಿದಂತೆ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಎಲ್ಲಾ ಸರ್ಕಾರಿ ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮೂಲೆಗುಂಪು ಮಾಡಿದೆ. ಈ ಎಲ್ಲ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಜನರೇ ತುಂಬಿಹೋಗಿದ್ದಾರೆ' ಎಂದು ಟೀಕಿಸಿದ್ದರು.
'ರಾಷ್ಟ್ರದ ನ್ಯಾಯಾಂಗವೂ ಸಹ ಒತ್ತಡದಲ್ಲಿದೆ. ನ್ಯಾಯಾಲಯಗಳ ಮೇಲೆ ಒಂದೇ ಸಿದ್ದಾಂತವನ್ನು ಹೇರಲಾಗುತ್ತಿದೆ. ನಮಗಿರುವುದು ಇದೊಂದೇ ದಾರೆ. ಇದೊಂದೇ ಮಾರ್ಗ. ಇದೊಂದೇ ಆಯ್ಕೆ. ಈಗ ನಾವು ರಸ್ತೆಗೆ ಇಳಿಯಬೇಕಿದೆ. ಜನರನ್ನು ಅಪ್ಪಿಕೊಳ್ಳಬೇಕಿದೆ. ರೈತರ ಮಾತುಗಳನ್ನು ಆಲಿಸಬೇಕಿದೆ. ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳೊಂದಿಗೆ ಬೆರೆಯಬೇಕಿದೆ' ಎಂದು ರಾಹುಲ್ ಹೇಳಿದ್ದರು.

3500 ಕಿಮೀ ಕ್ರಮಿಸಲಿದೆ ಭಾರತ್ ಜೋಡೊ ಯಾತ್ರೆ
ಭಾರತ್ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ. ಈಗಾಗಲೇ ಭಾರತದ ಆರು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಮಧ್ಯಪ್ರದೇಶದಲ್ಲಿ ಸಾಗುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಸಾಗಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಯಾತ್ರೆಯು 3500 ಕಿಮೀ ಕ್ರಮಿಸಲಿದೆ.